ಖಡ್ಗ ಖರೀದಿಸಿ ಅಯೋಧ್ಯೆ ತೀರ್ಪಿಗೆ ಸಿದ್ಧರಾಗಿ ಎಂದ ಬಿಜೆಪಿ ಮುಖಂಡ !

Update: 2019-10-20 14:41 GMT

ಲಕ್ನೊ, ಅ.20: ದೀಪಾವಳಿ ಹಬ್ಬದ ಆರಂಭದಲ್ಲಿ ಬರುವ ಧನತ್ರಯೋದಶಿಯಂದು ಚಿನ್ನಕ್ಕೆ ಪೂಜೆ ಸಲ್ಲಿಸುವ ಬದಲು ಖಡ್ಗಗಳನ್ನು ಖರೀದಿಸಿ ಅಯೋಧ್ಯೆ ಪ್ರಕರಣದ ಕುರಿತು ಹೊರಬೀಳುವ ತೀರ್ಪಿಗೆ ಸಿದ್ಧರಾಗಬೇಕು ಎಂದು ಉತ್ತರಪ್ರದೇಶದ ಬಿಜೆಪಿ ಮುಖಂಡ ಜನತೆಗೆ ಸಲಹೆ ನೀಡಿದ್ದಾರೆ.

ಖಡ್ಗಗಳನ್ನು ಖರೀದಿಸಿ ಇಟ್ಟುಕೊಳ್ಳಿ. ಮುಂದಿನ ದಿನದಲ್ಲಿ ಅದರ ಉಪಯೋಗ ಬೀಳಬಹುದು ಎಂದು ಉತ್ತರಪ್ರದೇಶದ ದಿಯೊಬಂದ್ ನಗರ ಬಿಜೆಪಿ ಅಧ್ಯಕ್ಷ ಗಜರಾಜ್ ರಾಣಾ ಹೇಳಿಕೆ ನೀಡಿದ್ದಾರೆ.

ದೀಪಾವಳಿ ಹಬ್ಬಕ್ಕೂ ಮೊದಲು ಆಚರಿಸುವ ಧನತ್ರಯೋದಶಿಯಂದು ಲೋಹದಿಂದ ತಯಾರಿಸಿದ ವಸ್ತುಗಳನ್ನು ಖರೀದಿಸಿ ಪೂಜಿಸುವ ಸಂಪ್ರದಾಯವಿದೆ. ಈ ವರ್ಷ ಅಕ್ಟೋಬರ್ 25ರಂದು ಧನತ್ರಯೋದಶಿ ಆಚರಿಸಲಾಗುತ್ತದೆ. “ಅಯೋಧ್ಯೆಯಲ್ಲಿ ರಾಮನ ಭವ್ಯಮಂದಿರ ನಿರ್ಮಾಣವಾಗಿ ಎಲ್ಲರಿಗೂ ರಾಮನ ದರ್ಶನಕ್ಕೆ ಅವಕಾಶ ದೊರಕಬೇಕೆಂದು ದೇಶದ ಜನತೆ ಬಯಸುತ್ತಿದ್ದಾರೆ. ಅಯೋಧ್ಯೆ ವಿವಾದದ ಬಗ್ಗೆ ಸುಪ್ರೀಂಕೋರ್ಟ್‌ನ ತೀರ್ಪು ಶೀಘ್ರ ಹೊರಬೀಳುವ ನಿರೀಕ್ಷೆಯಿದ್ದು ರಾಮಮಂದಿರದ ಪರ ತೀರ್ಪು ಹೊರಬೀಳುವ ನಿರೀಕ್ಷೆಯಿದೆ. ಆದರೆ ಇದರಿಂದ ಪರಿಸ್ಥಿತಿ ಹದಗೆಡಬಹುದು. ಆದ್ದರಿಂದ ಚಿನ್ನದ ಆಭರಣ, ಬೆಳ್ಳಿಯ ಪಾತ್ರೆ ಖರೀದಿಸುವ ಬದಲು ಖಡ್ಗಗಳನ್ನು ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುವಂತೆ ಸಲಹೆ ನೀಡುತ್ತೇನೆ. ಇದು ನಮ್ಮ ರಕ್ಷಣೆಗೆ ಅತ್ಯಗತ್ಯವಾಗಿದೆ” ಎಂದು ರಾಣಾ ಹೇಳಿದ್ದಾರೆ.

ಈ ಹೇಳಿಕೆ ವಿವಾದಕ್ಕೆ ಕಾರಣವಾಗಬಹುದು ಎಂದು ಅರಿತುಕೊಂಡ ಅವರು ತಕ್ಷಣ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದು, ಯಾವುದೇ ಸಮುದಾಯ ಅಥವಾ ಧರ್ಮವನ್ನು ಉದ್ದೇಶಿಸಿ ತಾನು ಈ ಹೇಳಿಕೆ ನೀಡಿಲ್ಲ ಎಂದಿದ್ದಾರೆ. “ನಮ್ಮ ಸಂಪ್ರದಾಯದಲ್ಲಿ ಆಯುಧಗಳನ್ನು ಪೂಜಿಸುವ ಸಂಪ್ರದಾಯವಿದೆ ಮತ್ತು ಸಂದರ್ಭ ಬಂದಾಗ ದೇವತೆಗಳೂ ಆಯುಧಗಳನ್ನು ಬಳಸಿದ್ದಾರೆ. ಬದಲಾಗುತ್ತಿರುವ ಸನ್ನಿವೇಶ, ಸಂದರ್ಭವನ್ನು ಉಲ್ಲೇಖಿಸಿ ನನ್ನ ಸಮುದಾಯಕ್ಕೆ ನೀಡಿರುವ ಸಲಹೆಯಾಗಿದೆ. ಇದಕ್ಕೆ ಹೆಚ್ಚಿನ ಅರ್ಥ ಕಲ್ಪಿಸುವ ಅಗತ್ಯವಿಲ್ಲ” ಎಂದಿದ್ದಾರೆ.

ಈ ಮಧ್ಯೆ, ರಾಣಾ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ. ರಾಣಾ ಆಡಿರುವ ಮಾತಿಗೆ ಬಿಜೆಪಿಯ ಬೆಂಬಲವಿಲ್ಲ. ಅದು ಅವರ ವೈಯಕ್ತಿಕ ಹೇಳಿಕೆ. ಯಾವುದೇ ಮುಖಂಡ ನೀಡುವ ಹೇಳಿಕೆ ಪಕ್ಷದ ಸಿದ್ಧಾಂತದ ಚೌಕಟ್ಟಿನೊಳಗೆ ಇರಬೇಕು. ಕಾನೂನಿಗಿಂತ ಯಾರೂ ಹೆಚ್ಚಿನವರಲ್ಲ ಎಂದು ಬಿಜೆಪಿಯ ರಾಜ್ಯ ವಕ್ತಾರ ಚಂದ್ರಮೋಹನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News