ಕಮಲೇಶ್ ತಿವಾರಿ ಹತ್ಯೆ: ಸ್ಥಳೀಯ ಬಿಜೆಪಿ ನಾಯಕನತ್ತ ಬೆಟ್ಟು ಮಾಡಿರುವ ಕುಟುಂಬ

Update: 2019-10-20 14:56 GMT

ಲಕ್ನೋ, ಅ.20: ಹಿಂದೂ ಸಮಾಜ ಪಕ್ಷದ ನಾಯಕ ಕಮಲೇಶ ತಿವಾರಿ ಹತ್ಯೆಗೆ ಸ್ಥಳೀಯ ಬಿಜೆಪಿ ನಾಯಕರು ಮತ್ತು ಆದಿತ್ಯನಾಥ ಸರಕಾರ ಕಾರಣವೆಂದು ಅವರ ಕುಟುಂಬವು ರವಿವಾರ ದೂರುವುದರೊಂದಿಗೆ ಈ ಪ್ರಕರಣವು ಹೊಸ ತಿರುವನ್ನು ಪಡೆದುಕೊಂಡಿದೆ. ತಿವಾರಿ ಕುಟುಂಬವು ಆದಿತ್ಯನಾಥರ ಕಚೇರಿಯಲ್ಲಿ ಅವರನ್ನು ಭೇಟಿ ಕೂಡ ಮಾಡಿದೆ.

ದೇವಸ್ಥಾನವೊಂದರ ವಿವಾದಕ್ಕೆ ಸಂಬಂಧಿಸಿದಂತೆ ಥಥೇರಿ ನಿವಾಸಿ,ಸ್ಥಳೀಯ ಬಿಜೆಪಿ ನಾಯಕ ಶಿವಕುಮಾರ ಗುಪ್ತಾ ತನ್ನ ಪುತ್ರನ ಹತ್ಯೆಗೆ ಸಂಚು ರೂಪಿಸಿದ್ದ ಎಂದು ತಿವಾರಿಯವರ ತಾಯಿ ಕುಸುಮ್ ತಿವಾರಿ ಆರೋಪಿಸಿದ್ದಾರೆ. ಗುಪ್ತಾನನ್ನು ‘ಮಾಫಿಯಾ’ ಎಂದು ಬಣ್ಣಿಸಿರುವ ಅವರು,ಆತನ ವಿರುದ್ಧ ಸುಮಾರು 500 ಪ್ರಕರಣಗಳಿವೆ ಎಂದು ಹೇಳಿದ್ದಾರೆ.

ಕಮಲೇಶ್ ಹತ್ಯೆಗೆ ಆದಿತ್ಯನಾಥ ಸರಕಾರ ಮತ್ತು ಬಿಜೆಪಿ ಕಾರಣವೆಂದೂ ಆರೋಪಿಸಿರುವ ಕುಸುಮ್,ತನ್ನ ಪುತ್ರನನ್ನು ಎದುರಿಸುವುದು ಅವರಿಗೆ ಕಷ್ಟವಾಗಿತ್ತು ಎಂದಿದ್ದಾರೆ.

ತನ್ನ ಕೊಲೆಯಾಗುವ ಮುನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಲೈವ್ ವೀಡಿಯೊದಲ್ಲಿ,ಬಿಜೆಪಿ ನಾಯಕರು ತನ್ನ ಹತ್ಯೆಗೆ ಸಂಚು ರೂಪಿಸುತ್ತಿದ್ದಾರೆ ಎಂದು ಕಮಲೇಶ ಕೂಡ ಹೇಳಿದ್ದರು. ಆದಿತ್ಯನಾಥ ಸರಕಾರವು ಅಧಿಕಾರ ವಹಿಸಿಕೊಂಡ ಬೆನ್ನಿಗೇ ತನ್ನ ಭದ್ರತೆಯನ್ನು ಹಿಂದೆಗೆದುಕೊಳ್ಳಲಾಗಿತ್ತು ಎಂದೂ ಅವರು ತಿಳಿಸಿದ್ದರು.

ಅವರು (ಬಿಜೆಪಿ ನಾಯಕರು) ತನ್ನ ಹತ್ಯೆಗೆ ಸಂಚು ರೂಪಿಸುತ್ತಿದ್ದಾರೆ,ಆದರೂ ತಾನು ಹಿಂದುಗಳಿಗಾಗಿ ಹೋರಾಡುತ್ತಿರುವುದರಿಂದ ಈಗಲೂ ಅವರ ಕಾರ್ಯಕರ್ತರ ಜೊತೆಯಲ್ಲಿದ್ದೇನೆ. ಈ ಹೋರಾಟದಲ್ಲಿ ತಾನು ಏಕಾಂಗಿಯಾಗಿದ್ದೇನೆ ಎಂದು ಕಮಲೇಶ ವೀಡಿಯೊದಲ್ಲಿ ಹೇಳಿದ್ದರು.

ಕಮಲೇಶ್ ಕೊಲೆಯಾದ ದಿನ ಬೆಳಿಗ್ಗೆ ಕೇಸರಿ ಕುರ್ತಾಗಳನ್ನು ಧರಿಸಿದ್ದ ಇಬ್ಬರು ವ್ಯಕ್ತಿಗಳು ಅವರ ಮನೆಯತ್ತ ಹೋಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ನಾಕಾ ಪ್ರದೇಶದಲ್ಲಿರುವ ಕಮಲೇಶರ ನಿವಾಸದಲ್ಲಿ ಅವರನ್ನು ಭೇಟಿಯಾಗಿದ್ದ ಇಬ್ಬರು ವ್ಯಕ್ತಿಗಳು ಮೊದಲ ಮಹಡಿಯಲ್ಲಿ ಅರ್ಧ ಗಂಟೆ ಅವರೊಂದಿಗೆ ಮಾತುಕತೆ ನಡೆಸಿದ್ದರು. ಚಹಾ ಸೇವಿಸಿದ ಬಳಿಕ ಅವರು ಕಮಲೇಶರ ಮೇಲೆ ದಾಳಿ ನಡೆಸಿ ಅಲ್ಲಿಂದ ತೆರಳಿರುವಂತಿದೆ. ಪಾಥಮಿಕ ತನಿಖೆಯು ಅವರಿಬ್ಬರೂ ಕಮಲೇಶಗೆ ಪರಿಚಿತರಾಗಿದ್ದರು ಎಂಬ ಸುಳಿವನ್ನು ನೀಡಿದೆ ಎಂದು ಲಕ್ನೋ ಎಸ್‌ಎಸ್‌ಪಿ ಕಲಾನಿಧಿ ನೈಥಾನಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

2015ರಲ್ಲಿ ಕಮಲೇಶ್ ಪೋಸ್ಟ್ ಮಾಡಿದ್ದ ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಮಾನಕಾರಿ ಟೀಕೆಯು ಕೊಲೆಯ ಹಿಂದಿನ ಮುಖ್ಯ ಕಾರಣವಾಗಿದೆ ಎಂದು ಈ ಮೊದಲು ಪೊಲೀಸರು ಹೇಳಿದ್ದರು,ತನ್ಮೂಲಕ ಅವರ ಕೊಲೆಯಲ್ಲಿ ಮುಸ್ಲಿಮರು ಭಾಗಿಯಾಗಿದ್ದಾರೆ ಎಂದು ಬೆಟ್ಟು ಮಾಡುವ ಸ್ಪಷ್ಟ ಪ್ರಯತ್ನವೊಂದು ನಡೆದಿತ್ತು. ಆಗಿನಿಂದ ಪೊಲೀಸರು ಹಿಂದೆ ಕಮಲೇಶ ವಿರುದ್ಧ ಮಾತನಾಡಿದ್ದ ಗುಜರಾತ್, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿಯ ಕೆಲವು ಮುಸ್ಲಿಮರ ಹಿಂದೆ ಬಿದ್ದಿದ್ದಾರೆ. ಈವರೆಗೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಕಮಲೇಶ ಪತ್ನಿ ಎಫ್‌ಐಆರ್‌ನಲ್ಲಿ ಹೆಸರಿಸಿದ್ದ ಬಿಜ್ನೋರ್‌ನ ಇಬ್ಬರು ಮೌಲ್ವಿಗಳೂ ಸೇರಿದ್ದಾರೆ. ಇವರು ವರ್ಷಗಳ ಹಿಂದೆ ಪ್ರವಾದಿ ಮುಹಮ್ಮದ್‌ರ ವಿರುದ್ಧ ಅವಮಾನಕಾರಿ ಟೀಕೆಗಾಗಿ ಕಮಲೇಶ ತಲೆಗೆ ಬಹುಮಾನವನ್ನು ಘೋಷಿಸಿದ್ದರು ಎನ್ನಲಾಗಿದೆ.

 ಈ ಬಂಧನಗಳ ಬಳಿಕ ‘ತಿವಾರಿಯವರ ಹತ್ಯೆ ಬಗ್ಗೆ ಉದಾರವಾದಿಗಳೇಕೆ ಮೌನವಾಗಿದ್ದಾರೆ ?’ ಎಂಬ ಪ್ರಶ್ನೆಯೊಂದಿಗೆ ಅವರ ಶವದ ಚಿತ್ರಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಹತ್ಯೆಗೆ ಕೋಮುಬಣ್ಣ ನೀಡಲು ದುಷ್ಕರ್ಮಿಗಳು ಟ್ವಿಟರ್‌ನಲ್ಲಿ ಸಕ್ರಿಯವಾಗಿದ್ದಾರೆ.

ಸಿಸಿಟಿವಿಯಲ್ಲಿ ಗುರುತಿಸಲಾಗಿರುವ ಇಬ್ಬರು ವ್ಯಕ್ತಿಗಳ ಪತ್ತೆಗಾಗಿಯೂ ಪೊಲೀಸರು ಪ್ರಯತ್ನಿಸಿದ್ದಾರೆ. ಅವರಿಬ್ಬರೂ ಗುಜರಾತ್ ನಿಂದ ಲಕ್ನೋಕ್ಕೆ ಆಗಮಿಸಿದ್ದು,ಅವರು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಎಲ್ಲೋ ಇದ್ದಾರೆ ಎನ್ನುವುದು ಅವರ ಕುರಿತು ಲಭಿಸಿರುವ ಕೊನೆಯ ಮಾಹಿತಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News