ನಿರ್ಮಲಾ ಸೀತಾರಾಮನ್ ಜೆಎನ್‌ಯುನಲ್ಲಿ ನನ್ನ ಸಮಕಾಲೀನರಾಗಿದ್ದರು: ಅಭಿಜಿತ್ ಬ್ಯಾನರ್ಜಿ

Update: 2019-10-20 16:08 GMT

ಹೊಸದಿಲ್ಲಿ, ಅ.20: ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ದಿಲ್ಲಿಯ ಜವಾಹರಲಾಲ್ ನೆಹರು ವಿವಿ (ಜೆಎನ್‌ಯು)ಯಲ್ಲಿ ತನ್ನ ಸಮಕಾಲೀನರಾಗಿದ್ದರು ಮತ್ತು ಹಲವಾರು ವಿಷಯಗಳಲ್ಲಿ ತಮ್ಮಿಬ್ಬರ ದೃಷ್ಟಿಕೋನಗಳು ಒಂದೇ ಆಗಿದ್ದವು ಎಂದು ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ ಪುರಸ್ಕೃತ ಭಾರತೀಯ-ಅಮೆರಿಕನ್ ಆರ್ಥಿಕ ತಜ್ಞ ಅಭಿಜಿತ್ ಬ್ಯಾನರ್ಜಿ ಅವರು ಹೇಳಿದ್ದಾರೆ.

ಆರ್ಥಿಕತೆ ಬಿಕ್ಕಟ್ಟಿನಲ್ಲಿದೆ ಎಂಬ ಬ್ಯಾನರ್ಜಿ ಹೇಳಿಕೆಗೆ ಸೀತಾರಾಮನ್ ಪ್ರತಿಕ್ರಿಯಿಸಿಲ್ಲವಾದರೂ,ಅದನ್ನು ಅಲ್ಲಗಳೆದಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು,ಇದು ಎಡಪಂಥೀಯ ವಿಚಾರಧಾರೆಯ ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ ಎಂದು ಟೀಕಿಸಿದ್ದರು. ಜೆಎನ್‌ಯು ಸಾಂಪ್ರದಾಯಿಕವಾಗಿ ಎಡರಂಗದ ಭದ್ರಕೋಟೆಯಾಗಿದೆ.

ತನ್ನ ವ್ಯಾಸಂಗದಲ್ಲಿ ಜೆಎನ್‌ಯು ಪಾತ್ರ ಮತ್ತು ವಿವಿಯಲ್ಲಿನ ಹಾಲಿ ಗೊಂದಲಗಳ ಬಗ್ಗೆ ಅಭಿಪ್ರಾಯ ಕುರಿತು ಪ್ರಶ್ನೆಗೆ ಉತ್ತರಿಸಿರುವ ಬ್ಯಾನರ್ಜಿ, ಸದ್ಯದ ಪರಿಸ್ಥಿತಿಯನ್ನು ‘ದುರದೃಷ್ಟಕರ ’ಎಂದು ಬಣ್ಣಿಸಿದ್ದಾರೆ.

‘ನನಗೆ ಚೆನ್ನಾಗಿ ತಿಳಿದಿದ್ದ ಮತ್ತು ಕೆಲವು ವಿಷಯಗಳಲ್ಲಿ ಸಮಾನ ದೃಷ್ಟಿಕೋನಗಳನ್ನು ಹೊಂದಿದ್ದವರಲ್ಲಿ ಸೀತಾರಾಮನ್ ಒಬ್ಬರಾಗಿದ್ದರು. ಅವರು ಜೆಎನ್‌ಯುನಲ್ಲಿ ನನ್ನ ಸಮಕಾಲೀನರಾಗಿದ್ದರು. ನಾವು ನಿಕಟ ಸ್ನೇಹಿತರಾಗಿದ್ದರು ಎಂದು ನಾನು ಹೇಳುವುದಿಲ್ಲ, ಅದರೆ ನಾವು ಸ್ನೇಹಿತರಾಗಿದ್ದೆವು ಮತ್ತು ನಾವು ತೀವ್ರ ಭಿನ್ನಾಭಿಪ್ರಾಯಗಳನ್ನು ಹೊಂದಿರಲಿಲ್ಲ ’ ಎಂದು ಆಂಗ್ಲ ಸುದ್ದಿವಾಹಿನಿಗೆ ನೀಡಿದ ಸಂದರ್ಶನಲ್ಲಿ ಬ್ಯಾನರ್ಜಿ ಹೇಳಿದ್ದಾರೆ.

ಭಾರತೀಯ ಆರ್ಥಿಕತೆಯ ಕುರಿತು ತನ್ನ ಅಭಿಪ್ರಾಯಗಳಿಂದಾಗಿ ಬ್ಯಾನರ್ಜಿಯವರನ್ನು ಆಡಳಿತ ಬಿಜೆಪಿ ದೂರವೇ ಇಟ್ಟಿದೆ. ನೋಟು ನಿಷೇಧ ಒಳ್ಳೆಯ ಕ್ರಮವಾಗಿರಲಿಲ್ಲ ಎಂದು ಬಣ್ಣಿಸಿದ್ದ ಅವರು ಸರಕಾರದ ಅಂಕಿಅಂಶಗಳ ಕುರಿತೂ ಮಾತನಾಡಿದ್ದರು. ಬಳಕೆದಾರ ಕ್ಷೇತ್ರದಲ್ಲಿ ಮಂದಗತಿಯು ದೇಶದ ಆರ್ಥಿತೆಯು ಬಿಕ್ಕಟ್ಟಿನಲ್ಲಿದೆ ಎನ್ನುವುದರ ಸಂಕೇತವಾಗಿದೆ ಎಂದು ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News