ಕುರ್ದಿಷ್ ಬಂಡುಕೋರರ ವಿರುದ್ಧ 5 ದಿನಗಳ ಕದನ ವಿರಾಮಕ್ಕೆ ಟರ್ಕಿ ಅಸ್ತು

Update: 2019-10-20 17:02 GMT

ಅಂಕಾರ,ಅ.20: ಪ್ರತ್ಯೇಕ ನಾಡಿಗಾಗಿ ಹೋರಾಡುತ್ತಿರುವ ಕುರ್ದಿಷ್ ಬಂಡುಕೋರರು ಟರ್ಕಿ, ಸಿರಿಯ ಗಡಿಯುದ್ದಕ್ಕೂ ಇರುವ ಸುರಕ್ಷಿತ ವಲಯದಿಂದ ಹಿಂದೆ ಸರಿದಲ್ಲಿ ಸಿರಿಯದ ಮೇಲಿನ ತನ್ನ ದಾಳಿಯನ್ನು ಐದು ದಿನಗಳ ಕಾಲ ಸ್ಥಗಿತಗೊಳಿಸಲು ಟರ್ಕಿ ರವಿವಾರ ಒಪ್ಪಿಕೊಂಡಿದೆ.

ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಹಾಗೂ ಟರ್ಕಿಯ ಉನ್ನತ ಅಧಿಕಾರಿಗಳ ನಡುವೆ ನಡೆದ ಉನ್ನತ ಮಟ್ಟದ ಮಾತುಕತೆಗಳ ಬಳಿಕ ಟರ್ಕಿಯು ಐದು ದಿನಗಳ ಕದನವಿರಾಮ ಘೋಷಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ.

ಈ ಒಪ್ಪಂದದಿಂದಾಗಿ ಟರ್ಕಿ ಹಾಗೂ ಅಮೆರಿಕ ನಡುವೆ ಉಂಟಾಗಿದ್ದ ಬಿಕ್ಕಟ್ಟು ತಾತ್ಕಾಲಿಕವಾಗಿ ಶಮನಗೊಂಡಂತಾಗಿದೆ. ಆದರೆ ಅಮೆರಿಕವು ತನ್ನ ಕುರ್ದಿಶ್ ಜೊತೆಗಾರರನ್ನು ಮತ್ತೊಮ್ಮೆ ಕೈಬಿಟ್ಟಿದೆಯೆಂದು ಟೀಕಾಕಾರರು ಆರೋಪಿಸಿದ್ದಾರೆ.

ಮೈಕ್ ಪೆನ್ಸ್ ಅವರು ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ನಡೆಸಿದ ಮಾತುಕತೆಯ ವೇಳೆ ಏರ್ಪಟ್ಟ ಒಪ್ಪಂದದ ಪ್ರಕಾರ, ಕುರ್ದಿಷ್ ಬಂಡುಕೋರರು ತಾವು ಅಕ್ರಮಿಸಿಕೊಂಡಿರುವ ಟರ್ಕಿ-ಸಿರಿಯ ಗಡಿಯಲ್ಲಿರುವ 32 ಕಿ.ಮೀ. ವಿಸ್ತೀರ್ಣದ ಸುರಕ್ಷಿತ ವಲಯದಿಂದ ಹಿಂದೆ ಸರಿಯಬೇಕಾಗಿದೆ.

 ಮಾತುಕತೆಯ ಬಳಿಕ ಮೈಕ್ ಪೆನ್ಸ್ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಾ, ಕುರ್ದಿಷ್ ಪಡೆಗಳ ಪ್ರಾಬಲ್ಯವಿರುವ ಸಿರಿಯನ್ ಪ್ರಜಾತಾಂತ್ರಿಕ ಪಡೆಗಳಳು (ಎಸ್‌ಡಿಎಫ್) ಸಂಪೂರ್ಣವಾಗಿ ಹಿಂದೆ ಸರಿಯುತ್ತಿದ್ದಂತೆಯೇ ಸಿರಿಯ ಗಡಿಯಲ್ಲಿ ಟರ್ಕಿ ಪಡೆಗಳ ಕಾರ್ಯಾಚರಣೆಯು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ತರುವಾಯ ಅಮೆರಿಕವು ಟರ್ಕಿಯ ವಿರುದ್ಧ ವಿಧಿಸಿರುವ ನಿರ್ಬಂಧಗಳನ್ನು ಹಿಂತೆಗೆದುಗೊಳ್ಳಲಿದೆ ಎಂದರು.

ಈ ಮಧ್ಯೆ ಎಸ್‌ಡಿಎಫ್‌ನ ವರಿಷ್ಠ ಮಝ್ಲೂಮ್ ಅಬ್ದಿ ಅವರು ಹೇಳಿಕೆಯೊಂದನ್ನು ನೀಡಿ, ರಾಸ್ ಅಲ್ ಐನ್ ನಿಂದ ತಾಲ್ ಅಬ್ಯಾದ್‌ವರೆಗಿನ ಪ್ರದೇಶದಲ್ಲಿ ಕದನ ವಿರಾಮ ಏರ್ಪಡುವುದನ್ನು ಪಾಲಿಸಲು ತಮ್ಮ ಪಡೆಗಳು ಸಿದ್ಧವಿರುವುದಾಗಿ ಎಸ್‌ಡಿಎಫ್ ವರಿಷ್ಠ ಮಝ್ಲುಮ್ ಅಬ್ದಿ ತಿಳಿಸಿದ್ದಾರೆ.

 ಆದರೆ ಅಮೆರಿಕದ ನಿಲುವಿನಿಂದ ಕುರ್ದಿಶ್ ಬಂಡುಕೋರರಿಗೆ ಸಂತಸವಾಗಿಲ್ಲವೆಂಬುದನ್ನು ಸಿರಿದಲ್ಲಿ ಅಮೆರಿಕ ರಾಜನೀತಿ ನಿರೂಪಕ ಜೇಮ್ಸ್ ಜೆಫ್ರಿ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಉಳಿದುಕೊಳ್ಳಲು ಖುರ್ದಿಶ್ ಬಂಡುಕೋರರು ಬಯಸುತ್ತಿದ್ದಾರೆಂಬುದರಲ್ಲಿ ಯಾವುದೇ ಸಂದೇಹವಿಲ್ಲ.

 ಟರ್ಕಿ-ಸಿರಿಯ ಗಡಿಯಲ್ಲಿ ಘರ್ಷಣೆ ಭುಗಿಲೆದ್ದ ಬಳಿಕ 3 ಲಕ್ಷಕ್ಕೂ ಅಧಿಕ ನಾಗರಿಕರು ನಿರಾಶ್ರಿತರಾಗಿದ್ದಾರೆ ಹಾಗೂ 500ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಅವರಲ್ಲಿ ಬಹುತೇಕ ವುಂದಿ ಖುರ್ದಿಷ್ ಹೋರಾಟಗಾರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News