ಜಗತ್ತಿನ ಅತ್ಯಂತ ದೀರ್ಘದೂರದ ವಿಮಾನ ಹಾರಾಟ ಪರೀಕ್ಷೆ ಯಶಸ್ವಿ

Update: 2019-10-20 17:20 GMT

ಸಿಡ್ನಿ, ಅ.20: ಜಗತ್ತಿನ ಅತ್ಯಂತ ದೀರ್ಘ ದೂರದ ತಡೆರಹಿತ ಪ್ರಯಾಣಿಕ ವಿಮಾನದ ಪ್ರಾಯೋಗಿಕ ಪರೀಕ್ಷೆ ರವಿವಾರ ಯಶಸ್ವಿಯಾಗಿ ನಡೆಯಿತು. ಕ್ವಾಂಟಾಸ್ ವಾಯುಯಾನ ಸಂಸ್ಥೆಯ ಕ್ಯೂಎಫ್7879 ವಿಮಾನವು ಅಮೆರಿಕದ ನ್ಯೂಯಾರ್ಕ್‌ನಿಂದ ಆಸ್ಟ್ರೇಲಿಯದ ಸಿಡ್ನಿಗೆ ಪ್ರಯಾಣಿಸಲು ಗಗನದಲ್ಲಿ 19 ತಾಸು 16 ನಿಮಿಷಗಳ ಕಾಲ ಸುದೀರ್ಘ ಹಾರಾಟ ನಡೆಸಿತೆಂದು ವಾಯುಯಾನಸಂಸ್ಥೆಯ ಮೂಲಗಳು ತಿಳಿಸಿವೆ.

ಬೋಯಿಂಗ್ 787-9 ಮಾದರಿಯ ಈ ವಿಮಾನದ ಪ್ರಾಯೋಗಿಕ ಹಾರಾಟದಲ್ಲಿ ಕೇವಲ 49 ಮಂದಿ ಪ್ರಯಾಣಿಸಿದ್ದರು. ನ್ಯೂಯಾರ್ಕ್‌ನಿಂದ ಸಿಡ್ನಿ ತಲುಪಲು ವಿಮಾನವು 16 ಸಾವಿರ ಕಿ.ಮೀ. (9500 ಮೈಲುಗಳು) ವರೆಗೆ ಪ್ರಯಾಣಿಸಿತು ಎಂದು ಕ್ವಾಂಟಾಸ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಏರ್‌ಲೈನ್ ಸಂಸ್ಥೆ ಹಾಗೂ ಜಾಗತಿಕ ವಿಮಾನಯಾನ ಇವೆರಡಕ್ಕೂ ಇದೊಂದು ಐತಿಹಾಸಿಕ ಕ್ಷಣವಾಗಿದೆಯೆಂದು ಕ್ವಾಂಟಾಸ್‌ನ ಸಿಇಓ ಅಲನ್ ಜಾಯ್ಸಾ ತಿಳಿಸಿದ್ದಾರೆ.

ಪ್ರಯಾಣಿಕರು ವಿವಿಧ ಕಾಲಾಮಾನದ ವಲಯಗಳನ್ನು ಹಾದುಹೋಗುವುದರಿಂದ ಪ್ರಯಾಣಿಕರು ಹಾಗೂ ವಿಮಾನಸಿಬ್ಬಂದಿಯ ದೇಹಸ್ಥಿತಿಯ ಮೇಲೆ ಯಾವ ಪರಿಣಾಮವುಂಟಾಗಲಿದೆಯೆಂಬ ಬಗ್ಗೆ ನಿಗಾವಿರಿಸಲು ಕ್ವಾಂಟಾಸ್ ಅಸ್ಟ್ರೇಲಿಯದ ಎರಡು ವಿವಿಗಳ ತಜ್ಞರನ್ನು ನಿಯೋಜಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News