ಪೊಲೀಸ್ ಚಿತ್ರಹಿಂಸೆ ಹೇಗಿರುತ್ತದೆ? ಬಂಗಾಳ ಕಾಂಗ್ರೆಸ್ ಮುಖಂಡನ ಮಾತಲ್ಲೇ ಕೇಳಿ...

Update: 2019-10-21 04:39 GMT

ಕೊಲ್ಕತ್ತಾ, ಅ.21: ಎರಡು ದಿನಗಳ ಪೊಲೀಸ್ ಕಸ್ಟಡಿಯಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಪಶ್ಚಿಮ ಬಂಗಾಳ ಕಾಂಗ್ರೆಸ್ ಮುಖಂಡ ಸನ್ಮಯ್ ಬಂಡೋಪಾಧ್ಯಾಯ, ಪೊಲೀಸ್ ಠಾಣೆಯಲ್ಲಿ 'ಅತ್ತೆ ಮತ್ತು ಅಳಿಯ' (ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ)ನ ಸೂಚನೆಯಂತೆ ಅಮಾನವೀಯವಾಗಿ ಚಿತ್ರಹಿಂಸೆ ನೀಡಲಾಗಿದೆ ಎಂದು ಆಪಾದಿಸಿದ್ದಾರೆ.

ಸತತ ಹದಿನಾಲ್ಕು ಗಂಟೆ ಕಾಲ ಒಂದು ಹನಿ ನೀರು ಕುಡಿಯಲೂ ಪೊಲೀಸರು ಅವಕಾಶ ನೀಡಲಿಲ್ಲ ಎಂದು ದೂರಿದ್ದಾರೆ. ರಾಜ್ಯದಲ್ಲಿ ಜಂಗಲ್ ರಾಜ್ ಆಡಳಿತದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಹೀಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಸನ್ಮಯ್ ಹೇಳಿದ್ದಾರೆ.

"ಬಂಗಾಳದ ಮಣ್ಣಿನಲ್ಲಿ ನಾನು ಇಂಥದ್ದನ್ನು ನೋಡಬೇಕಾಯಿತು. ಇದನ್ನು ವಿವರಿಸುವಾಗ ನಾನು ಅವಮಾನದಿಂದ ತಲೆತಗ್ಗಿಸುತ್ತಿದ್ದೇನೆ. ಅತ್ತೆ- ಅಳಿಯನ ಸೂಚನೆಯ ಅನ್ವಯ ಹೀಗೆ ಮಾಡಲಾಗಿದೆ" ಎಂದು ವಿವರಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಸರ್ಕಾರದ ಆಡಳಿತದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದಕ್ಕಾಗಿ ಫೋರ್ಜರಿ, ಮಾನಹಾನಿ ಮತ್ತು ಶಾಂತಿ ಭಂಗ ತರುವ ರೀತಿಯಲ್ಲಿ ಪ್ರಚೋದನೆ ನೀಡಿದ ಆರೋಪದಲ್ಲಿ ಸನ್ಮಯ್ ಬಂಡೋಪಾಧ್ಯಾಯ ಅವರನ್ನು ಬಂಧಿಸಲಾಗಿತ್ತು.

"ಅಮಾನವೀಯವಾಗಿ ನನಗೆ ಚಿತ್ರಹಿಂಸೆ ನೀಡಲಾಯಿತು. 40-50 ಹೊಡೆತಗಳು ನನಗೆ ಬಿದ್ದವು" ಎಂದು ಮಾಜಿ ಪತ್ರಕರ್ತರೂ ಆದ ಅವರು ಬಣ್ಣಿಸಿದರು. ತಮ್ಮ "ಬಂಗ್ಲರ್ ಬರ್ತಾ" ಎಂಬ ಯು-ಟ್ಯೂಬ್ ಚಾನೆಲ್‌ನಲ್ಲಿ ರಾಜ್ಯ ಸರ್ಕಾರವನ್ನು, ಹಿರಿಯ ಅಧಿಕಾರಿಗಳನ್ನು, ಪೊಲೀಸ್ ಅಧಿಕಾರಿಗಳನ್ನು ಕಟುವಾಗಿ ಟೀಕಿಸುವ ವೀಡಿಯೊಗಳನ್ನು ಕಳೆದ ಜೂನ್‌ನಿಂದೀಚೆಗೆ ಅವರು ಪೋಸ್ಟ್ ಮಾಡುತ್ತಿದ್ದರು.

"ಹಲವು ಬಾರಿ ನಾನು ನೀರು ಕೇಳಿದೆ. ನನ್ನ ಎದುರಿಗೇ ಕುಡಿಯುವ ನೀರು ಕಾಣುತ್ತಿತ್ತು. ಆದರೆ 14 ಗಂಟೆ ಕಾಲ ಒಂದು ಹನಿ ನೀರನ್ನೂ ಕೊಡಲಿಲ್ಲ. ಸ್ಟೂಲ್‌ನಲ್ಲಿ ನನ್ನನ್ನು ಕೂರಿಸಲಾಗಿತ್ತು. ಮುಂಜಾನೆ 4:50ಕ್ಕೆ ಹೊರಗೆ ಕರೆತಂದರು. ಒಂದು ವಾಹನದಲ್ಲಿ ಕೂರಿಸಿದರು. ಎಲ್ಲಿಗೆ ಕರೆದೊಯ್ಯಲಾಗುತ್ತಿದೆ ಎಂದು ಪದೇಪದೇ ಕೇಳಿದರೂ ಉತ್ತರಿಸಲಿಲ್ಲ"

ನಾನು ಅಸತ್ಯ ಬರೆದಿದ್ದರೆ ನನ್ನ ಮೇಲೆ ಮಾನಹಾನಿ ಪ್ರಕರಣ ದಾಖಲಿಸಬಹುದಿತ್ತು. ಆದರೆ ಇದೇನು? ನಾನು ಕಾಂಗ್ರೆಸ್ ಶಾಸಕ ನೇಪಾಲ್ ಮಹತೊ ಅವರಿಗೆ ಚಿರಋಣಿ. ಅವರು ಮತ್ತು ಕಾಂಗ್ರೆಸ್ ಮುಖಂಡರು ಇಲ್ಲದಿದ್ದರೆ ನಾನು ಜೀವಂತ ಉಳಿಯುತ್ತಿರಲಿಲ್ಲ. ನಾನು ಸಾಯುತ್ತೇನೆ ಎಂದು ಹಲವು ಬಾರಿ ಅನಿಸಿತ್ತು" ಎಂದು ವಿವರಿಸಿದ್ದಾರೆ.

"ನನಗೆ ಚಿತ್ರಹಿಂಸೆ ನೀಡಲು ಏಕೆ ಪೊಲೀಸರನ್ನು ಬಳಸಿಕೊಂಡರು? ಅಂಥದ್ದು ಹಿಟ್ಲರ್ ಹಾಗೂ ಮುಸೊಲಿನಿ ಆಡಳಿತದಲ್ಲೂ ನಡೆದಿತ್ತೇ ಎನ್ನುವುದು ನನಗೆ ತಿಳಿಯದು" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News