ಮಹಾರಾಷ್ಟ್ರ, ಹರ್ಯಾಣ ವಿಧಾನಸಭೆಗೆ ಮತದಾನ ಆರಂಭ

Update: 2019-10-21 04:44 GMT

ಮುಂಬೈ, ಅ.21: ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭೆಗೆ ಮತದಾನ ಪ್ರಕ್ರಿಯೆ ಸೋಮವಾರ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಸಂಜೆ 6 ಗಂಟೆಗೆ ಮತದಾನ ಕೊನೆಯಾಗುವ ನಿರೀಕ್ಷೆಯಿದೆ.

ಮಹಾರಾಷ್ಟ್ರದಲ್ಲಿ 288 ಅಸೆಂಬ್ಲಿ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ-ಶಿವಸೇನೆ ಮೈತ್ರಿಕೂಟ ಸತತ ಎರಡನೇ ಅವಧಿಗೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿದೆ.

ವಿಧಾನಸಭೆಯ ಚುನಾವಣೆಗೆ ಜೊತೆಗೆ ಸತಾರದಲ್ಲಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆಯೂ ನಡೆಯುತ್ತಿದೆ. ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಉದಯರಾಜೆ ಬೋಸ್ಲೆ ಇತ್ತೀಚೆಗೆ ಎನ್‌ಸಿಪಿ ತೊರೆದ ಬಿಜೆಪಿ ಸೇರಿರುವ ಕಾರಣ ಚುನಾವಣೆ ಅನಿವಾರ್ಯವಾಗಿದೆ.

ಹರ್ಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಬಿಜೆಪಿ ಸುಲಭ ಜಯದ ನಿರೀಕ್ಷೆಯಲ್ಲಿದೆ. ಹರ್ಯಾಣದ ಕಾಂಗ್ರೆಸ್ ಅಧ್ಯಕ್ಷೆ ಕುಮಾರಿ ಸೆಲ್ಜಾ, ಟಿಕ್‌ಟಾಕ್ ಸ್ಟಾರ್ ಹಾಗೂ ಬಿಜೆಪಿ ಅಭ್ಯರ್ಥಿ ಸೋನಾಲಿ ಫೋಗಟ್, ಕುಸ್ತಿಪಟು ಯೋಗೇಶ್ವರ ದತ್ತ ಬೆಳಗ್ಗೆಯೇ ತಮ್ಮ ಮತ ಚಲಾಯಿಸಿದರು. ಹರ್ಯಾಣದ ಏಕೈಕ ಮಹಿಳಾ ಸಚಿವೆ ಕವಿತಾ ಜೈನ್ ಸೋನಿಪತ್‌ನಲ್ಲಿ ಮತ ಚಲಾಯಿಸಿದರು.

ಬಿಜೆಪಿ-ಶಿವಸೇನೆ ಪ್ರಚಂಡ ಗೆಲುವಿನೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮತ ಚಲಾಯಿಸಿದ ಬಳಿಕ ಕೇಂದ್ರದ ಹಿರಿಯ ಸಚಿವ ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News