'370ನೆ ವಿಧಿ ರದ್ದತಿ ಬಗ್ಗೆ ಮಾತನಾಡುವಂತಿಲ್ಲ': ಬಿಡುಗಡೆಯಾದವರಿಗೆ ಬಾಂಡ್ ಮೂಲಕ ನಿರ್ಬಂಧ

Update: 2019-10-21 11:20 GMT

ಹೊಸದಿಲ್ಲಿ, ಅ.21: ಜಮ್ಮು ಕಾಶ್ಮೀರದಲ್ಲಿ 370ನೆ ವಿಧಿ ರದ್ದತಿ ಬಳಿಕ ಗೃಹಬಂಧನಕ್ಕೊಳಗಾಗಿ ಬಿಡುಗಡೆಗೊಳ್ಳುವ ರಾಜಕೀಯ ನಾಯಕರು ಮತ್ತು ಇತರರಿಂದ ಬಾಂಡ್ ಒಂದಕ್ಕೆ ಸಹಿ ಮಾಡಿಸಲಾಗುತ್ತಿದ್ದು, 'ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಘಟನೆಗಳ ಕುರಿತು ಮಾತನಾಡದಂತೆ' ಇದು ನಿರ್ಬಂಧ ಹೇರುತ್ತದೆ ಎಂದು ವರದಿಯಾಗಿದೆ. ಮಾತನಾಡುವ ಹಕ್ಕಿನ ಸಾಂವಿಧಾನಿಕ ರಕ್ಷಣೆಯನ್ನು ಇದು ಉಲ್ಲಂಘಿಸುತ್ತದೆ ಎನ್ನುವ ಆರೋಪ ಕೇಳಿಬರುತ್ತಿದೆ.

ಇತ್ತೀಚೆಗೆ ಬಿಡುಗಡೆಯಾದ ಇಬ್ಬರು ಮಹಿಳೆಯರಿಗೆ ಸೆಕ್ಷನ್ 107ರ ಬಾಂಡ್ ಗೆ ಸಹಿ ಮಾಡಿಸಲಾಗಿದೆ ಎಂದು The Telegraph ವರದಿ ಮಾಡಿದೆ. 'ಶಾಂತಿಗೆ ಭಂಗ ತರುವುದಿಲ್ಲ' ಅಥವಾ 'ಶಾಂತಿಗೆ ಭಂಗ ತರುವ ಯಾವುದೇ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ' ಎಂದು ಈ ಬಾಂಡ್ ಗೆ ಸಹಿ ಹಾಕುವವರು ಪ್ರಮಾಣ ಮಾಡಬೇಕಿದೆ.

ಇದಿಷ್ಟೇ ಅಲ್ಲದೆ ಈ ಬಾಂಡ್ ನಲ್ಲಿ ಪ್ರಮುಖ ಶರತ್ತು "ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಘಟನೆಗಳ ಬಗ್ಗೆ ಬಾಂಡ್ ಗೆ ಸಹಿ ಹಾಕಿದವರು, ಯಾವುದೇ ಹೇಳಿಕೆ, ಪ್ರಕಟನೆ, ಸಾರ್ವಜನಿಕ ಭಾಷಣ ಮಾಡುವಂತಿಲ್ಲ" ಎಂದಿದೆ ಎಂದು ವರದಿ ತಿಳಿಸಿದೆ.

'ಇತ್ತೀಚಿನ ಘಟನೆಗಳು' ಎನ್ನುವ ಉಲ್ಲೇಖವು ಸ್ಪಷ್ಟವಾಗಿ 370ನೆ ವಿಧಿ ರದ್ದತಿಯನ್ನು ಉಲ್ಲೇಖಿಸುತ್ತದೆ. ಇಷ್ಟೇ ಅಲ್ಲದೆ ಸಹಿ ಹಾಕಿದವರು 10 ಸಾವಿರ ರೂ. 'ಶ್ಯೂರಿಟಿ'ಯಾಗಿ ಮತ್ತು 40 ಸಾವಿರ ರೂ.ಗಳನ್ನು ಬಾಂಡ್ ನಿಯಮಗಳನ್ನು ಉಲ್ಲಂಘಿಸದಂತೆ ಶ್ಯೂರಿಟಿಗಾಗಿ ನೀಡಬೇಕಿದೆ. ಈ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಇವರು ಮತ್ತೊಮ್ಮೆ ಬಂಧನಕ್ಕೊಳಗಾಗುವ ಸಾಧ್ಯತೆಯೂ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News