ಹಸಿವು ಮುಕ್ತ ಭಾರತ ಎಂದು?

Update: 2019-10-21 18:13 GMT

ಮಾನ್ಯರೇ,

ಇತ್ತೀಚೆಗೆ ವರದಿಯಾದ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 102ನೇ ಸ್ಥಾನದಲ್ಲಿದೆಯೆಂದು ಕಂಡುಬಂದಿದೆ. ಅಪೌಷ್ಟಿಕತೆ, ಮಕ್ಕಳ ಕುಂಠಿತ ಬೆಳವಣಿಗೆ, ಕಡಿಮೆ ತೂಕದ ಮಕ್ಕಳು ಹಾಗೂ ಶಿಶುಮರಣದ ಪ್ರಮಾಣವನ್ನು ಆಧರಿಸಿ ಈ ಸೂಚ್ಯಂಕವನ್ನು ರೂಪಿಸಲಾಗಿದೆ. ವಿಶ್ವ ಹಸಿವು ಸೂಚ್ಯಂಕದ ಪಟ್ಟಿಯಲ್ಲಿ ಭಾರತವು 2000ನೇ ಇಸವಿಯಲ್ಲಿ 83ನೇ ಸ್ಥಾನದಲ್ಲಿತ್ತು ಎನ್ನುವುದನ್ನು ಪರಿಗಣಿಸಿದರೆ, ಎರಡು ದಶಕಗಳಲ್ಲಿ ನಾವು ಸಾಧಿಸಿರುವ ಅಭಿವೃದ್ಧಿಯ ಅಸಲಿಯತ್ತಿನ ಬಗ್ಗೆಯೇ ಗಂಭೀರ ವಿಮರ್ಶೆ ನಡೆಯಬೇಕಿದೆ. ಸ್ವಾತಂತ್ರ್ಯ ಪಡೆದಂದಿನಿಂದ ಈವರೆಗೆ ಬಡತನ-ಹಸಿವು ನಿರ್ಮೂಲನಕ್ಕೆೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ‘ಗರೀಬಿ ಹಠಾವೊ’ದಿಂದ ಕರ್ನಾಟಕದ ‘ಅನ್ನಭಾಗ್ಯ’ದವರೆಗಿನ ಹಲವು ಯೋಜನೆಗಳು ಹಸಿವಿನ ನಿರ್ಮೂಲನೆಯ ಉದ್ದೇಶದಿಂದಲೇ ರೂಪುಗೊಂಡಂತಹವು. ಉಚಿತವಾಗಿ ಇಲ್ಲವೆ ರಿಯಾಯಿತಿ ದರದಲ್ಲಿ ದವಸ ಧಾನ್ಯ ವಿತರಿಸುವ ಪಡಿತರ ಯೋಜನೆಗಳು ಎಲ್ಲ ರಾಜ್ಯಗಳಲ್ಲಿವೆ. ಇಷ್ಟೆಲ್ಲ ಕಾರ್ಯಕ್ರಮಗಳ ನಂತರವೂ ಹಸಿವಿನ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ ಎಂದರೆ ಸರಕಾರದ ಯೋಜನೆಗಳು ಅರ್ಹರನ್ನು ತಲುಪುವಲ್ಲಿ ಯಶಸ್ವಿಯಾಗಿಲ್ಲ ಎಂದಾಯಿತು. ಆಹಾರಧಾನ್ಯಗಳ ಸಂಗ್ರಹ ಹಾಗೂ ವಿತರಣೆ ಕೂಡ ಸಮರ್ಪಕವಾಗಿಲ್ಲ. ಒಂದೆಡೆ ಹೊಟ್ಟೆ ಹಸಿದ ಮಂದಿಯಿದ್ದರೆ, ಇನ್ನೊಂದು ತುದಿಯಲ್ಲಿ ಗೋದಾಮುಗಳಲ್ಲಿನ ಆಹಾರ ಕೊಳೆಯುತ್ತಿದೆ, ಇಲಿ- ಹೆಗ್ಗಣಗಳ ಪಾಲಾಗುತ್ತಿದೆ. ಶ್ರೀಮಂತವರ್ಗ ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಐದನೇ ಒಂದು ಪಾಲು ಪೋಲಾಗುತ್ತಿದೆ ಎನ್ನುವ ವರದಿಯೂ ಇದೆ. ಅನ್ನದ ಈ ಅಪಬಳಕೆಯು ಅಮಾನವೀಯ, ಅನೈತಿಕ. ಆಹಾರವು ಮನುಷ್ಯನ ಕನಿಷ್ಠ ಹಾಗೂ ಮೂಲಭೂತ ಅಗತ್ಯ. ಹಸಿವುಮುಕ್ತ ಭಾರತವನ್ನಾಗಿಸುವ ಪ್ರಯತ್ನವನ್ನು ಒಂದು ಬೃಹತ್ ಹಾಗೂ ಪ್ರಾಮಾಣಿಕ ಆಂದೋಲನವಾಗಿ ಬೆಳೆಸಬೇಕಾದ ಸವಾಲು ಸರಕಾರದ ಮುಂದಿದೆ. ಸರಕಾರವು ಈ ಬಗ್ಗೆ ನಿರ್ಲಕ್ಷ ತೋರದೆ ದೇಶವನ್ನು ಹಸಿವುಮುಕ್ತ ಭಾರತವನ್ನಾಗಿ ಮಾಡುವಲ್ಲಿ ಶ್ರಮವಹಿಸಬೇಕಿದೆ

Writer - -ಸಂತೋಷ ಜಾಬೀನ್, ಸುಲೇಪೇಟೆ

contributor

Editor - -ಸಂತೋಷ ಜಾಬೀನ್, ಸುಲೇಪೇಟೆ

contributor

Similar News