'ಮೋದಿ ವಿರೋಧಿ' ಹೇಳಿಕೆಗಾಗಿ ಮಾಧ್ಯಮ ನಿಮಗೆ ಬಲೆ ಬೀಸಿದೆ ಎಂದು ಪ್ರಧಾನಿ ಹಾಸ್ಯ ಮಾಡಿದರು: ಅಭಿಜಿತ್ ಬ್ಯಾನರ್ಜಿ

Update: 2019-10-22 12:51 GMT

ಹೊಸದಿಲ್ಲಿ : 'ಮೋದಿ ವಿರೋಧಿ' ವಿಚಾರಗಳನ್ನು ಹೇಳುವಂತೆ ಮಾಡಲು ಮಾಧ್ಯಮ ನಿಮಗೆ ಹೇಗೆ ಬಲೆ ಬೀಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಸ್ಯ ಚಟಾಕಿ ಸಿಡಿಸಿದರೆಂದು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಪ್ರಧಾನಿಯನ್ನು ಭೇಟಿಯಾದ ನಂತರ ಪತ್ರಕರ್ತರ ಜತೆ ಮಾತನಾಡುತ್ತಾ ಹೇಳಿದ್ದಾರೆ.

"ಅವರು ಟಿವಿ ನೋಡಿದ್ದಾರೆ, ಅವರು ನಿಮ್ಮನ್ನು ಗಮನಿಸುತ್ತಿದ್ದಾರೆ. ನೀವೇನು ಮಾಡಲು ಯತ್ನಿಸುತ್ತಿದ್ದೀರೆಂದು ಅವರಿಗೆ ಗೊತ್ತು. ಆದುದರಿಂದ ನಿಲ್ಲಿಸಿ,'' ಎಂದು ಬ್ಯಾನರ್ಜಿ ಪತ್ರಕರ್ತರಿಗೆ ನಗುತ್ತಾ ಹೇಳಿದರು.

ಪ್ರಧಾನಿ ಜತೆಗಿನ ತಮ್ಮ ಭೇಟಿಯನ್ನು `ವಿಶಿಷ್ಟ ಅನುಭವ' ಎಂದು ಬಣ್ಣಿಸಿದ ಅವರು  ತಮಗೆ 'ಸಾಕಷ್ಟು ಸಮಯ' ಒದಗಿಸಿದ್ದಕ್ಕೆ ಪ್ರಧಾನಿಗೆ ಧನ್ಯವಾದ ತಿಳಿಸಿದರು. "ಭಾರತದ ಬಗ್ಗೆ ತಮ್ಮ ಅನಿಸಿಕೆಯ ಬಗ್ಗೆ ಪ್ರಧಾನಿ ಬಹಳಷ್ಟು ಮಾತನಾಡಿದರು ಅದು ಸಾಕಷ್ಟು ವಿಶಿಷ್ಟವಾಗಿತ್ತು, ತಾವು ಆಡಳಿತವನ್ನು ನೋಡುವ  ಪರಿಯ ಬಗ್ಗೆ ಹಾಗೂ ಕೆಲವೊಮ್ಮ  ತಳಮಟ್ಟದಲ್ಲಿ ಜನರಿಗಿರುವ ಅಪನಂಬಿಕೆ ಆಡಳಿತಕ್ಕೆ ಬಣ್ಣ ಹಚ್ಚುತ್ತದೆ ಎಂಬುದರ ಕುರಿತಂತೆಯೂ  ಅವರುಮಾತನಾಡಿದರು,'' ಎಂದು ಬ್ಯಾನರ್ಜಿ ಹೇಳಿಕೊಂಡರು.

``ಸರಕಾರ ಆಡಳಿತಶಾಹಿಯಲ್ಲಿ ಸುಧಾರಣೆ ತರಲು ಹೇಗೆ ಯತ್ನಿಸುತ್ತಿದೆ ಹಾಗೂ ಜನರ ಅಭಿಪ್ರಾಯಗಳನ್ನು ಹೇಗೆ ಗಣನೆಗೆ ತೆಗೆದುಕೊಳ್ಳುತ್ತಿದೆ ಎಂದೂ ಪ್ರಧಾನಿ ವಿವರಿಸಿದರು,'' ಎಂದು ಬ್ಯಾನಜಿ ತಿಳಿಸಿದರು.

ಪ್ರಧಾನಿ ಕೂಡ ತಾವು ಅಭಿಜಿತ್ ಬ್ಯಾನರ್ಜಿ ಅವರನ್ನು ಭೇಟಿಯಾದ ಸಂದರ್ಭದ ಫೋಟೋ ಟ್ವೀಟ್ ಮಾಡಿ ``ನೋಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಜತೆ ಅತ್ಯುತ್ತಮ ಭೇಟಿ. ಮಾನವ ಸಬಲೀಕರಣಕ್ಕೆ ಅವರಿಗಿರುವ ಉತ್ಸಾಹ ಎದ್ದು ಕಾಣುತ್ತದೆ. ನಾವು ವಿವಿಧ ವಿಚಾರಗಳ ಕುರಿತಂತೆ ಆರೋಗ್ಯಕರ ಚರ್ಚೆ ನಡೆಸಿದೆವು. ಅವರ ಸಾಧನೆಗಳ ಬಗ್ಗೆ ಭಾರತಕ್ಕೆ ಹೆಮ್ಮೆಯಿದೆ. ಅವರ ಭವಿಷ್ಯದ ಯೋಜನೆಗಳಿಗೆ ಅವರಿಗೆ ಶುಭ ಕೋರುತ್ತೇನೆ,'' ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News