ಪಿಎನ್‌ಬಿ ಹಗರಣ: ಸಿಬಿಐಗೆ ನ್ಯಾಯಾಲಯ ನೋಟಿಸ್

Update: 2019-10-22 14:32 GMT

ಹೊಸದಿಲ್ಲಿ, ಅ. 22: ಮೆಹುಲ್ ಚೋಕ್ಸಿ ಪ್ರಧಾನ ಆರೋಪಿಯಾಗಿರುವ ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿ ಸಲ್ಲಿಸಲಾದ ಎರಡು ಮನವಿಗಳ ಹಿನ್ನೆಲೆಯಲ್ಲಿ ಮುಂಬೈ ವಿಶೇಷ ಸಿಬಿಐ ನ್ಯಾಯಾಲಯ ಮಂಗಳವಾರ ಸಿಬಿಐಗೆ ನೋಟಿಸು ಜಾರಿ ಮಾಡಿದೆ. ಗೀತಾಂಜಲಿ ಜೆಮ್ಸ್‌ನ ಪ್ರವರ್ತಕ ಮೆಹುಲ್ ಚೋಕ್ಸಿ ಹಾಗೂ ಸೋದರಳಿಯ ನೀರವ್ ಮೋದಿಯನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿಗಳು ಎಂದು ಹೇಳಲಾಗಿದೆ.

 ಮೆಹುಲ್ ಚೋಕ್ಸಿ ದೇಶದಿಂದ ಪರಾರಿಯಾಗಿದ್ದಾನೆ. ಆತನಿಗೆ 2018 ಜನವರಿ 15ರಂದು ಆಂಟಿಗುವಾ ಹಾಗೂ ಬರ್ಬುಡಾ ಪೌರತ್ವ ನೀಡಿತ್ತು. ಮೆಹುಲ್ ಚೋಕ್ಸಿಯನ್ನು ಘೋಷಿತ ಅಪರಾಧಿ ಎಂದು ಪ್ರಕಟಿಸುವಂತೆ ಸಿಬಿಐ ಈ ಹಿಂದೆ ನ್ಯಾಯಾಲಯದಲ್ಲಿ ಮನವಿ ಮಾಡಿತ್ತು. ಅಲ್ಲದೆ, ಆತನ ಸೊತ್ತನ್ನು ಕ್ರಿಮಿನಲ್ ಕಾನೂನಿನ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡಿತ್ತು.

 ತಮ್ಮ ಕಕ್ಷಿಗಾರ ಮೆಹುಲ್ ಚೋಕ್ಸಿಯ ಪ್ರತಿಪಾದನೆ ಆಲಿಸದೆ ನೀಡುತ್ತಿರುವ ಇಂತಹ ಆದೇಶ ಸಹಜ ನ್ಯಾಯದ ಉಲ್ಲಂಘನೆ ಎಂದು ಮೆಹುಲ್ ಚೋಕ್ಸಿ ಪರ ನ್ಯಾಯವಾದಿಗಳಾದ ವಿಜಯ್ ಅಗರ್ವಾಲ್ ಹಾಗೂ ಅಂಶುಲ್ ಅಗರ್ವಾಲ್ ಸಲ್ಲಿಸಿದ ಮೊದಲ ಮನವಿಯಲ್ಲಿ ಹೇಳಲಾಗಿದೆ. ಮೆಹುಲ್ ಚೋಕ್ಸಿ ವಿರುದ್ಧ ಬಾಕಿ ಇರುವ ಜಾಮೀನು ರಹಿತ ಬಂಧನಾದೇಶವನ್ನು ರದ್ದುಗೊಳಿಸುವಂತೆ ಇಬ್ಬರೂ ನ್ಯಾಯವಾದಿಗಳು ಮನವಿ ಮಾಡಿದ್ದರು. ಅಲ್ಲದೆ, ಅದನ್ನು ವಿಲೇವಾರಿ ಮಾಡದೆ ತನ್ನ ಕಕ್ಷಿದಾರನನ್ನು ಅಪರಾಧಿ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಎರಡನೇಯದ್ದು ಸಿಬಿಐ ಮುಟ್ಟುಗೋಲು ಹಾಕಿಕೊಂಡ ಗೀತಾಂಜಲಿ ಜೆಮ್ಸ್ ಲಿಮಿಟೆಡ್‌ನ ಸರ್ವರಲ್ಲಿ ಸಂಗ್ರಹವಾದ ದತ್ತಾಂಶದ ಪ್ರತಿ ನೀಡುವಂತೆ ಎ.ಎಸ್. ನಾಯರ್ ಸಲ್ಲಿಸಿದ ಮನವಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News