ಎಡಪಂಥೀಯ ನಾನು ಪ್ರವಾದಿಯನ್ನು ಪ್ರಶಂಸಿಸುವ ಟ್ವಿಟರ್ ಅಭಿಯಾನದಲ್ಲಿ ಭಾಗಿಯಾಗಿದ್ದೇಕೆ?

Update: 2019-10-22 14:38 GMT
ಉಮರ್ ಖಾಲಿದ್

ಉತ್ತರ ಪ್ರದೇಶದಲ್ಲಿ ಇತ್ತೀಚಿಗೆ ನಡೆದ ಕಮಲೇಶ್ ತಿವಾರಿ ಕೊಲೆ ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಕೊಲೆಗೆ ಹಲವಾರು ಕಾರಣಗಳನ್ನು ಮುಂದಿಡಲಾಗುತ್ತಿದೆ. ಒಂದೆಡೆ ಪೊಲೀಸರು ಮೂವರು ಮುಸ್ಲಿಮರನ್ನು ಬಂಧಿಸಿದ್ದಾರೆ ಮತ್ತು ಆರಂಭದ ನಿರಾಕರಣೆಯ ಬಳಿಕ ಈಗ ಪ್ರಕರಣಕ್ಕೆ ಕೋಮು ಬಣ್ಣ ನೀಡುತ್ತಿದ್ದಾರೆ. ಇನ್ನೊಂದೆಡೆ ಕಮಲೇಶ್ ಕುಟುಂಬವು ಹತ್ಯೆಗೆ ರಾಜ್ಯದ ಬಿಜೆಪಿ ನಾಯಕ, ಥಥೇರಿ ನಿವಾಸಿ ಶಿವಕುಮಾರ ಗುಪ್ತಾ ಅವರೇ ಕಾರಣರೆಂದು ಆರೋಪಿಸಿದೆ. ಪೊಲೀಸ್ ತನಿಖೆ ಮುಂದುವರಿದಿದೆಯಾದರೂ ಘಟನೆಯ ಹಿನ್ನೆಲೆಯಲ್ಲಿ ಈಗಾಗಲೇ ಕೋಮು ಉನ್ಮಾದವನ್ನು ಸೃಷ್ಟಿಸಲಾಗಿದೆ. ಇಂತಹ ಯಾವುದೇ ಅವಕಾಶವನ್ನು ತಪ್ಪಿಸಿಕೊಳ್ಳದ ಹಿಂದುತ್ವ ಬಲಪಂಥೀಯ ಡಿಜಿಟಲ್ ಸೇನೆಯು ತಕ್ಷಣವೇ ಕಾರ್ಯಾಚರಣೆಗಿಳಿದಿದೆ. ಮೊದಲ ದಿನವೇ ಅವರು ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್‌ರ ಕುರಿತು ಅತ್ಯಂತ ಅವಮಾನಕಾರಿ ಟ್ವೀಟ್‌ಗಳು ಮತ್ತು ಹ್ಯಾಷ್‌ಟ್ಯಾಗ್‌ಗಳನ್ನು ಪೋಸ್ಟ್ ಮಾಡಿದ್ದರು. ಶೀಘ್ರವೇ ಅದು 'ಮುಸ್ಲಿಮೋಂ ಕಾ ಸಂಪೂರ್ಣ ಬಹಿಷ್ಕಾರ್' ಹ್ಯಾಷ್‌ಟ್ಯಾಗ್‌ನೊಂದಿಗೆ ಮುಸ್ಲಿಮರ ಸಂಪೂರ್ಣ ಬಹಿಷ್ಕಾರಕ್ಕೆ ಕರೆಯಾಗಿ ಪರಿವರ್ತನೆಗೊಂಡಿದೆ.

ದ್ವೇಷವನ್ನು ಹೆಚ್ಚಿಸುವುದು, ಪ್ರಚೋದನೆ ಮತ್ತು ಧ್ರುವೀಕರಣ ಈ ಟ್ವೀಟ್‌ಗಳ ಹಿಂದಿನ ಸ್ಪಷ್ಟ ಉದ್ದೇಶವಾಗಿತ್ತು. ಇದು ಭಾರತದಲ್ಲಿ ಮುಸ್ಲಿಮರ ಧರ್ಮದ ಕುರಿತು ಅತ್ಯಂತ ಹೇಯ ನಿಂದನೆಗಳೊಂದಿಗೆ ಅವರನ್ನು ಅವಮಾನಿಸಬಹುದು ಮತ್ತು ಇದಕ್ಕಾಗಿ ಯಾವ ಕ್ರಮವನ್ನೂ ಕೈಗೊಳ್ಳಲಾಗುವುದಿಲ್ಲ ಎಂಬ ಬಹಿರಂಗ ಘೋಷಣೆಯಾಗಿತ್ತು. ವಾಸ್ತವದಲ್ಲಿ ಇಂತಹ ನಿಂದನೀಯ ಟ್ವೀಟ್‌ಗಳನ್ನು ಮಾಡುತ್ತಿರುವ ಕೆಲವು ಹ್ಯಾಂಡಲ್‌ಗಳನ್ನು ಹಿರಿಯ ಬಿಜೆಪಿ ನಾಯಕರು ಮತ್ತು ಸಚಿವರು ಫಾಲೋ ಮಾಡುತ್ತಿದ್ದಾರೆ. ಇದು ಪ್ರಸಕ್ತ ಭಾರತದಲ್ಲಿ ಹಿಂದು ಬಲಪಂಥೀಯವಾದಿಗಳ ನಿರ್ಭೀತಿಯ ಮಟ್ಟವನ್ನು ತೋರಿಸುತ್ತಿದೆ.

ಸದ್ಯೋಭವಿಷ್ಯದಲ್ಲಿ, ವಿಶೇಷವಾಗಿ ಅಯೋಧ್ಯೆ ವಿವಾದದ ತೀರ್ಪು ಸನ್ನಿಹಿತವಾಗುತ್ತಿರುವುದರಿಂದ ಇಂತಹ ವಿಭಜನಕಾರಿ ಮತ್ತು ದ್ವೇಷಪೂರ್ಣ ಸಂದೇಶಗಳು ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ. ಅಯೋಧ್ಯೆ ತೀರ್ಪು ಹೊರಬೀಳುತ್ತಿರುವ ಹಿನ್ನೆಲೆಯಲ್ಲಿ ಈ ಸಲದ ಧನ ತ್ರಯೋದಶಿಗೆ ಚಿನ್ನಬೆಳ್ಳಿ ಇತ್ಯಾದಿಗಳ ಬದಲಿಗೆ ಖಡ್ಗಗಳನ್ನು ಖರೀದಿಸುವಂತೆ ಉತ್ತರ ಪ್ರದೇಶದ ದೇವಬಂದ್‌ನ ಬಿಜೆಪಿ ನಾಯಕ ಗಿರಿರಾಜ ರಾಣಾ ಅವರು ಈಗಾಗಲೇ ಹಿಂದುಗಳನ್ನು ಕೋರಿಕೊಂಡಿದ್ದಾರೆ. ದ್ವೇಷವನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಎಷ್ಟೊಂದು ರಾಜಾರೋಷವಾಗಿ ನಡೆದಿದೆಯೆಂದರೆ ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳಿಗೆ ಮಾತ್ರ ನಿರ್ಬಂಧಿತವಾಗಿಲ್ಲ. ದಿನನಿತ್ಯದ ಸಂವಾದಗಳಲ್ಲಿಯೂ ಈ 'ದ್ವೇಷದ ಆಟ'ದ ಭಾಷೆಯು ಜಿನುಗುತ್ತಿದೆ.

ಇಂತಹ ವಿಷತ್ವಕ್ಕೆ ಉತ್ತರ ಏನಾಗಬಹುದು? ದ್ವೇಷದ ಆಟವನ್ನು ಮುಂದುವರಿಯಲು ಅವಕಾಶ ನೀಡುವ ಬದಲು ಕೆಲವರು ಪ್ರವಾದಿಯವರ ವಿರುದ್ಧ ಅವಮಾನಕಾರಿ ಟ್ವೀಟ್‌ಗಳಿಗೆ ಉತ್ತರವಾಗಿ 'ಪ್ರೊಫೆಟ್ ಆಫ್ ಕಂಪ್ಯಾಶನ್(ಕರುಣಾಳು ಪ್ರವಾದಿ)' ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಅಭಿಯಾನವನ್ನು ಆರಂಭಿಸಿದ್ದರು. ಈ ಟ್ವೀಟ್‌ಗಳು ಪ್ರವಾದಿ ಮುಹಮ್ಮದ್ ಅವರು ಪ್ರತಿಪಾದಿಸಿದ್ದ ಪ್ರೀತಿ ಮತ್ತು ಕರುಣೆಯ ಬಗ್ಗೆ ಹೇಳಿದ್ದವು. ಶೀಘ್ರವೇ ಕರುಣೆಯ ಕುರಿತು ಸಂದೇಶಗಳ ಮಹಾಪೂರದೊಂದಿಗೆ ಇದು ಜಾಗತಿಕ ಟ್ರೆಂಡ್ ಆಗುತ್ತಿದೆ. ಈ ಮೂಲಕ ಜನರು ಪರಸ್ಪರರ ಧರ್ಮಗಳನ್ನು ಅವಮಾನಿಸುವ ಸಾಮಾಜಿಕ ಜಾಲತಾಣಗಳಲ್ಲಿಯ ಸಂಭಾವ್ಯ ಸ್ಫೋಟಕ ಸ್ಥಿತಿ ಒಂದಿಷ್ಟು ತಿಳಿಯಾಗಿದೆ. 

ಈ ಅಭಿಯಾನದಲ್ಲಿ ನಾನೂ ಭಾಗವಹಿಸಿದ್ದೆ ಮತ್ತು ಬರಹವೊಂದನ್ನು ಪೋಸ್ಟ್ ಮಾಡಿದ್ದೆ. ನಿರೀಕ್ಷಿಸಿದ್ದಂತೆ ನನ್ನ ಪೋಸ್ಟ್‌ಗೆ ಹಲವಾರು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಕೆಲವು ಕೀಳು ಅಭಿರುಚಿಯದ್ದಾಗಿದ್ದವು ಮತ್ತು ಹೆಚ್ಚಾಗಿ ವೈಯಕ್ತಿಕ ನಿಂದನೆಗಳಾಗಿದ್ದವು.

ಎಡಪಂಥೀಯರು ಘೋಷಿತ ನಾಸ್ತಿಕರಲ್ಲವೇ? ಹೀಗಿರುವಾಗ ನಾನು ಎಡಪಂಥೀಯನಾಗಿ ಪ್ರವಾದಿಯವರನ್ನು ಕೊಂಡಾಡುವ ಈ ಟ್ವಿಟರ್ ಟ್ರೆಂಡ್‌ನಲ್ಲಿ ಭಾಗವಹಿಸಿದ್ದು ಹೇಗೆ ಎಂದು ಹಲವರು ಪ್ರಶ್ನಿಸಿದ್ದರು. ನಾನು ಈ ಪೋಸ್ಟ್ ಮೂಲಕ ಕೊನೆಗೂ ನನ್ನ 'ನಿಜವಾದ ಬಣ್ಣವನ್ನು, ನನ್ನೊಳಗಿನ ಇಸ್ಲಾಮನ್ನು' ಹೊರಹಾಕಿದ್ದೇನೆ ಎಂದೂ ಕೆಲವರು ಕುಟುಕಿದ್ದರು. ನಾನು ಜನಿಸಿರುವ ಧರ್ಮದೊಂದಿಗೆ ನನ್ನ ಸಂಬಂಧವನ್ನು ಬಹಿರಂಗವಾಗಿ ಪ್ರಕಟಿಸಬೇಕಾದ ಯಾವುದೇ ಅನಿವಾರ್ಯತೆಯು ನನಗಿಲ್ಲ. ಭಾರತದ ಸಂವಿಧಾನವಾಗಲೀ ಒಂದು ಧರ್ಮವಾಗಿ ಇಸ್ಲಾಂ ಆಗಲೀ ಅಂತಹ ಬಹಿರಂಗ ಹೇಳಿಕೆಯನ್ನು ನೀಡಲು ನನ್ನನ್ನು ಬಲವಂತಗೊಳಿಸುತ್ತಿಲ್ಲ. ಆದರೆ ನಾವು ಗಮನಿಸಬೇಕಾದ, ಗಹನವಾಗಿರುವ ಏನೋ ಇಲ್ಲಿದೆ.

2016ರ ಜೆಎನ್‌ಯು ವಿವಾದಕ್ಕೆ ಸಂಬಂಧಿಸಿದಂತೆ ನಾನು ಸೇರಿದಂತೆ ಮೂವರನ್ನು ಬಂಧಿಸಲಾಗಿತ್ತು, ಆದರೆ ನನ್ನನ್ನು ಮಾತ್ರ ಪಾಕಿಸ್ತಾನದೊಂದಿಗೆ ತಳುಕು ಹಾಕಲಾಗಿತ್ತು, ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವ್ಯಕ್ತಿ ಎಂದು ಆರೋಪಿಸಲಾಗಿತ್ತು. ಎಡಪಂಥೀಯನಾಗಿ ನನ್ನ ರಾಜಕೀಯ ನಂಬಿಕೆಗಳು ನನ್ನನ್ನು ಹೀಗೆ ಸ್ಟೀರಿಯೊಟೈಪ್ ಮಾಡುವುದರ ವಿರುದ್ಧ ರಕ್ಷಣೆ ನೀಡಿರಲಿಲ್ಲ. ಮೂರು ವರ್ಷಗಳ ಹಿಂದೆ ಜೆಎನ್‌ಯುನಿಂದ ನಾಪತ್ತೆಯಾಗಿರುವ ನಜೀಬ್ ಅಹ್ಮದ್‌ರನ್ನೂ ಐಸಿಸ್ ಜೊತೆಗೆ ತಳುಕು ಹಾಕಲಾಗಿತ್ತು. ಈ ಸುಳ್ಳುಸುದ್ದಿಯನ್ನು ಸ್ವತಃ ದಿಲ್ಲಿ ಪೊಲೀಸರೇ ಅಲ್ಲಗಳೆದಿದ್ದರೂ ನನ್ನ ಅಥವಾ ನಜೀಬ್ ಕುಟುಂಬದ ಕ್ಷಮೆ ಯಾಚಿಸಬೇಕೆಂದು ಯಾರಿಗೂ ಅನ್ನಿಸಿರಲೇ ಇಲ್ಲ. ಇಂತಹ ಹಣೆಪಟ್ಟಿಗೆ ನಮ್ಮನ್ನು ಸುಲಭಭೇದ್ಯವನ್ನಾಗಿಸಲು ನಮ್ಮ ಹೆಸರುಗಳು ಮತ್ತು ರಾಜಾರೋಷ ಇಸ್ಲಾಮೋಫೋಬಿಯಾ ಅಲ್ಲದೆ ಬೇರಾವ ಕಾರಣಗಳಿದ್ದವು?

ತಾನು 'ಒಳ್ಳೆಯ ಮುಸ್ಲಿಂ' ಮತ್ತು ಪ್ರಗತಿಪರ ಪ್ರಜೆ ಎಂದು ಪರಿಗಣಿಸಲ್ಪಡಬೇಕು ಎಂದು ಮುಸ್ಲಿ ವ್ಯಕ್ತಿ ಬಯಸಿದ್ದರೂ ಆತ/ಆಕೆ ತನ್ನ ಧರ್ಮದಿಂದ ಅಂತರವಿಟ್ಟುಕೊಳ್ಳಬೇಕೆಂದು ಸದಾ ನಿರೀಕ್ಷಿಸಲಾಗುತ್ತಿದೆ. ಬಹುಸಂಖ್ಯಾತ ಧರ್ಮದ ಜನರಿಗೆ, ಅವರ ಸಿದ್ಧಾಂತಗಳೇನೇ ಇರಲಿ, ಇಂತಹ ಬಾಧ್ಯತೆಗಳಿಲ್ಲ. ಓರ್ವ ಹಿಂದು ತಾನು ಆಸ್ತಿಕ ಅಥವಾ ನಾಸ್ತಿಕ ಎಂದು ಹೇಳಿಕೊಳ್ಳಬಹುದು, ಆದರೆ ಯಾವುದೇ ಸಮಸ್ಯೆಯಿಲ್ಲದೆ ಹಿಂದುತ್ವ ಅಥವಾ ಹಿಂದು ಅನನ್ಯತೆಯನ್ನು ಆತ ಬಹಿರಂಗವಾಗಿ ಸಮರ್ಥಿಸಿಕೊಳ್ಳಬಹುದು. ಇನ್ನೊಂದೆಡೆ ಓರ್ವ ಧರ್ಮಬೀರು ಮುಸ್ಲಿಂ ಎಂದೂ 'ಒಳ್ಳೆಯ ಮುಸ್ಲಿಂ' ಅಥವಾ ಪ್ರಗತಿಪರ ಪ್ರಜೆಯಾಗುವುದಿಲ್ಲ. ನೀವು ಆಸ್ತಿಕ ಮುಸ್ಲಿಮರೋ, ಅರೆ ಆಸ್ತಿಕರೋ ಅಥವಾ ನಾಸ್ತಿಕ ಮುಸ್ಲಿಮರೋ ಆಗಿರಲಿ, ನೀವು ಮುಸ್ಲಿಂ ಎಂಬ ಕಾರಣಕ್ಕಾಗಿ ಈ ವಿನಾಶಕಾರಿ ದ್ವೇಷದ ಗುರಿಯಾಗಿಯೇ ಇರುತ್ತೀರಿ ಎನ್ನವುದು ಇಲ್ಲಿ ಪ್ರಮುಖ ಅಂಶವಾಗಿದೆ.

ಮುಸ್ಲಿಮರನ್ನು ಬಹಿಷ್ಕರಿಸಲು, ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆಗಳನ್ನು ನೀಡಿರುವ ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಂ ವಿರುದ್ಧದ ಈ ಉಗ್ರ ಟ್ರೆಂಡ್‌ಗಳು ಹಾಗೂ ಇಂತಹ ಹಿಂಸಾಚಾರದ ಆರೋಪಿಗಳಿಗೆ ಬಿಜೆಪಿ ಸಚಿವರಿಂದ ಸನ್ಮಾನಗಳು ಪರಸ್ಪರ ಭಿನ್ನವಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಜನಸಾಮಾನ್ಯರಿಂದ ಹಿಡಿದು ಹಿರಿಯ ಸಚಿವರವರೆಗೆ ಯಾರೇ ಆದರೂ ಕೋಮು ಹೇಳಿಕೆಗಳನ್ನು ನೀಡಬಹುದು ಮತ್ತು ಕೂದಲೂ ಕೊಂಕದೆ ಪಾರಾಗಬಹುದು ಎನ್ನುವುದು ಕುತಂತ್ರವೊಂದನ್ನು ಪ್ರತಿಫಲಿಸುತ್ತಿದೆ ಎನ್ನುವುದು ಇಲ್ಲಿರುವ ಕಟುಸತ್ಯ. ಇವೆರಡಕ್ಕೂ ಒಂದೇ ಬಗೆಯ ದ್ವೇಷಭಾವನೆ ಮೂಲವಾಗಿದೆ ಮತ್ತು ಈ ದೇಶದಲ್ಲಿ ಮುಸ್ಲಿಮರ ಸ್ಥಾನವೇನು ಎನ್ನುವುದನ್ನು ಅವರಿಗೆ ನಿರಂತರವಾಗಿ ನೆನಪಿಸುವ ಪ್ರಯತ್ನವಾಗಿವೆ. ಇಂತಹ ಹೇಳಿಕೆಗಳನ್ನು ನೀಡಲು ಅನುಮತಿಯು ಬೀದಿಯಲ್ಲಿ ವ್ಯಕ್ತಿಯೋರ್ವನನ್ನು ಥಳಿಸಿ ಕೊಲ್ಲುವ ತುಡಿತದಿಂದ ಹೆಚ್ಚು ಭಿನ್ನವೇನಲ್ಲ.
ಇವೆಲ್ಲ ಒಂದು ಸಮಗ್ರ ಧರ್ಮವನ್ನು ಅಪರಾಧೀಕರಿಸುವ ಮತ್ತು ಆ ಧರ್ಮಕ್ಕೆ ಸೇರಿದವರನ್ನು ಸಾಧ್ಯವಿರುವ ಎಲ್ಲ ರೀತಿಗಳಲ್ಲಿಯೂ ಅವಹೇಳನ ಮಾಡಬಹುದು ಎನ್ನುವುದನ್ನು ಸಾಬೀತುಗೊಳಿಸುವ ಪ್ರಯತ್ನಗಳಾಗಿವೆ. 

ಇದು ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ನೀಡಿರುವ ಧಾರ್ಮಿಕ ಸ್ವಾತಂತ್ರದ ಹಕ್ಕನ್ನು ಬುಡಮೇಲುಗೊಳಿಸುತ್ತದೆ. ಮುಸ್ಲಿಮರು ಅಗೋಚರರಾಗಿರಬೇಕು ಅಥವಾ ಕನಿಷ್ಠ ಅವರ ಧರ್ಮ ಅಗೋಚರವಾಗಿರಬೇಕು ಎಂಬ ಕೆಲವು ಪ್ರಗತಿಪರರೂ ಸೇರಿದಂತೆ ನಿರೀಕ್ಷೆಯು ನಮ್ಮ ಸಂವಿಧಾನದ ಮೂಲ ಸಿದ್ಧಾಂತಗಳಿಗೆ ವಿರುದ್ಧವಾಗಿವೆ. ಯಾವುದೇ ಧರ್ಮವನ್ನು ಆಚರಿಸುವ ಹಕ್ಕು ಸಂವಿಧಾನವು ಪ್ರಜೆಗಳಿಗೆ ನೀಡಿರುವ ಖಾತರಿಯಾಗಿದೆಯೇ ಹೊರತು ಯಾವುದೇ ಸಮುದಾಯದ ಉದಾರತೆಯಲ್ಲ. ಮುಸ್ಲಿಮರೂ ಈ ದೇಶದ ಸಮಾನ ಪ್ರಜೆಗಳಾಗಿದ್ದಾರೆ ಮತ್ತು ಬೇಟೆಯ ಗುರಿಗಳಲ್ಲ ಎನ್ನುವುದನ್ನು ನಾವು ಪ್ರತಿಯೊಬ್ಬರಿಗೂ ಮತ್ತೆ ನೆನಪಿಸುವ ಅಗತ್ಯವಿದೆ.

ಲೇಖಕರು: ಉಮರ್ ಖಾಲಿದ್, ಸಾಮಾಜಿಕ ಹೋರಾಟಗಾರ ಹಾಗೂ ಮಾಜಿ ಜೆಎನ್‌ಯು ವಿದ್ಯಾರ್ಥಿ ನಾಯಕ

Similar News