ಆರ್. ಅಶ್ವಿನ್, ಮಾಯಾಂಕ್ ಅಗರ್ವಾಲ್ ಲಭ್ಯ

Update: 2019-10-23 02:41 GMT

ಬೆಂಗಳೂರು, ಅ.22: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 3-0 ಅಂತರದಲ್ಲಿ ಟೆಸ್ಟ್ ಸರಣಿ ಜಯಿಸಲು ನೆರವಾಗಿದ್ದ ಮಾಯಾಂಕ್ ಅಗರ್ವಾಲ್ ಹಾಗೂ ಆರ್.ಅಶ್ವಿನ್ 24 ಗಂಟೆಯೊಳಗೆ ಕ್ರಿಕೆಟ್ ಮೈದಾನಕ್ಕೆ ವಾಪಸಾಗಲಿದ್ದು, ಈ ಇಬ್ಬರು ವಿಜಯ ಹಝಾರೆ ಟ್ರೋಫಿ ಸೆಮಿ ಫೈನಲ್‌ನಲ್ಲಿ ಕ್ರಮವಾಗಿ ಕರ್ನಾಟಕ ಹಾಗೂ ತಮಿಳುನಾಡು ತಂಡದ ಪರ ಆಡಲಿದ್ದಾರೆ.

ಬುಧವಾರ ನಡೆಯಲಿರುವ ಮೊದಲ ಸೆಮಿ ಫೈನಲ್‌ನಲ್ಲಿ ಅಶ್ವಿನ್ ಅವರಿರುವ ತಮಿಳುನಾಡು ತಂಡ ಪಾರ್ಥಿವ್ ಪಟೇಲ್ ನಾಯಕತ್ವದ ಗುಜರಾತ್ ತಂಡವನ್ನು ಜಸ್ಟ್ ಕ್ರಿಕೆಟ್ ಅಕಾಡಮಿ ಮೈದಾನದಲ್ಲಿ ಎದುರಿಸಲಿದೆ. ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ನಡೆಯುವ ಮತ್ತೊಂದು ಸೆಮಿ ಫೈನಲ್‌ನಲ್ಲಿ ಆತಿಥೇಯ ಕರ್ನಾಟಕ ತಂಡ ಛತ್ತೀಸ್‌ಗಡವನ್ನು ಎದುರಿಸಲಿದೆ.

 ಕಳೆದ ರಾತ್ರಿ ಉದ್ಯಾನನಗರಿಯಲ್ಲಿ ಮಳೆ ಸುರಿದಿದೆ. ಬುಧವಾರದ ಹವಾಮಾನ ಕೂಡ ವ್ಯತಿರಿಕ್ತವಾಗಿದೆ. ಗ್ರೂಪ್ ಹಂತದಲ್ಲಿ ಹೆಚ್ಚು ಪಂದ್ಯಗಳನ್ನು ಜಯಿಸಿದ ಆಧಾರದಲ್ಲಿ ಪಂಜಾಬ್ ತಂಡವನ್ನು ಹಿಂದಿಕ್ಕಿದ ತಮಿಳುನಾಡು ಫೈನಲ್‌ಗೆ ಪ್ರವೇಶಿಸಿತ್ತು. ಒಂದು ವೇಳೆ ಸೆಮಿ ಫೈನಲ್ ಪಂದ್ಯ ಕೂಡ ಮಳೆಗಾಹುತಿಯಾದರೆ, ಗ್ರೂಪ್ ಹಂತದಲ್ಲಿ ಗರಿಷ್ಠ ಪಂದ್ಯಗಳನ್ನು ಜಯಿಸಿರುವ ತಮಿಳುನಾಡು ಹಾಗೂ ಕರ್ನಾಟಕ ಫೈನಲ್‌ಗೆ ತೇರ್ಗಡೆಯಾಗುತ್ತವೆ. ತಮಿಳುನಾಡು ಎ ಗುಂಪಿನಲ್ಲಿ ಆಡಿರುವ ಎಲ್ಲ 9 ಲೀಗ್ ಪಂದ್ಯಗಳಲ್ಲಿ ಜಯ ಸಾಧಿಸಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿದೆ. ಬಿ ಗುಂಪಿನಲ್ಲಿ ಕರ್ನಾಟಕ 8 ಪಂದ್ಯಗಳಲ್ಲಿ 7ರಲ್ಲಿ ಜಯ ಸಾಧಿಸಿದೆ.

  ಅಗರ್ವಾಲ್ ಸೇರ್ಪಡೆಯಿಂದಾಗಿ ಕರ್ನಾಟಕ ತಂಡದಲ್ಲಿ ಆಯ್ಕೆಗೆ ಸಂಬಂಧಿಸಿ ಆರೋಗ್ಯಕರ ಸ್ಪರ್ಧೆ ಏರ್ಪಡಲಿದೆ. ಟೀಮ್ ಮ್ಯಾನೇಜ್‌ಮೆಂಟ್ ಯಶಸ್ವಿ ಆರಂಭಿಕ ಜೋಡಿ ಕೆಎಲ್ ರಾಹುಲ್ ಹಾಗೂ 19ರ ಹರೆಯದ ದೇವದತ್ತ ಪಡಿಕ್ಕಲ್‌ರನ್ನು ಬದಲಿಸುತ್ತಾರೋ ಎಂದು ಕಾದುನೋಡಬೇಕಾಗಿದೆ. ಈ ಇಬ್ಬರು ಟೂರ್ನಿಯಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿದ್ದರು. ರಾಹುಲ್ 9 ಇನಿಂಗ್ಸ್‌ಗಳಲ್ಲಿ 458 ರನ್ ಗಳಿಸಿದ್ದು, ಇದರಲ್ಲಿ 1 ಶತಕ ಹಾಗೂ 3 ಅರ್ಧಶತಕಗಳಿವೆ. ಒಟ್ಟಾರೆ ಆರನೇ ಗರಿಷ್ಠ ರನ್ ಸ್ಕೋರರ್ ಆಗಿರುವ ಪಡಿಕ್ಕಲ್ 9 ಇನಿಂಗ್ಸ್‌ಗಳಲ್ಲಿ 2 ಶತಕ ಹಾಗೂ 4 ಅರ್ಧಶತಕಗಳ ಸಹಿತ 506 ರನ್ ಗಳಿಸಿದ್ದಾರೆ.

ಅಶ್ವಿನ್ ಸೇರ್ಪಡೆಯಿಂದಾಗಿ ತಮಿಳುನಾಡು ತಂಡ ಇಬ್ಬರು ಸ್ಪೆಷಲಿಸ್ಟ್ ಸ್ಪಿನ್ನರ್‌ಗಳನ್ನು ಅನಿವಾರ್ಯವಾಗಿ ಆಡಿಸಬೇಕಾಗಿದೆ. ಲೆಗ್ ಸ್ಪಿನ್ನರ್ ಎಂ.ಅಶ್ವಿನ್ ಈಗಾಗಲೇ ತಮಿಳುನಾಡು ತಂಡದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News