ವಿನೋದ್ ರಾಯ್, ಡಯಾನಾಗೆ ತಲಾ 3.5 ಕೋ.ರೂ.ಪಾವತಿಸಿದ ಬಿಸಿಸಿಐ

Update: 2019-10-23 02:44 GMT

ಹೊಸದಿಲ್ಲಿ, ಅ.22: ಕಳೆದ 33 ತಿಂಗಳ ಕಾಲ ಬಿಸಿಸಿಐನ ಆಡಳಿತ ನೋಡಿಕೊಂಡಿದ್ದ ಆಡಳಿತಾಧಿಕಾರಿಗಳ ಸಮಿತಿಯ(ಸಿಒಎ)ಮುಖ್ಯಸ್ಥ ವಿನೋದ್ ರಾಯ್ ಹಾಗೂ ಸಮಿತಿಯ ಸದಸ್ಯೆ ಡಯಾನಾ ಎಡುಲ್ಜಿಗೆ ಬಿಸಿಸಿಐ ತಲಾ 3.5 ಕೋ.ರೂ. ಪಾವತಿಸಿದೆ.

ಬುಧವಾರ ಬಿಸಿಸಿಐ ವಾರ್ಷಿಕ ಮಹಾಸಭೆ ನಡೆಯುವ ಮೂಲಕ ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ಆಡಳಿತಾಧಿಕಾರಿಗಳ ಸಮಿತಿಯ 33 ತಿಂಗಳ ಅಧಿಕಾರದ ಅವಧಿಯು ಕೊನೆಗೊಳ್ಳಲಿದೆ.

ಮಾಜಿ ಸಿಎಜಿ ರಾಯ್ ಹಾಗೂ ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಎಡುಲ್ಜಿ 2017ರ ಜನವರಿಯಲ್ಲಿ ಸಿಒಎಗೆ ಆಯ್ಕೆಯಾದ ಬಳಿಕ ಸಮಿತಿಯಲ್ಲೇ ಮುಂದುವರಿದಿದ್ದರು. ಆದರೆ, ಇವರಿಬ್ಬರ ಸಹೋದ್ಯೋಗಿಗಳಾದ ರಾಮಚಂದ್ರ ಗುಹಾ ಹಾಗೂ ವಿಕ್ರಂ ಲಿಮಯೆ ವಿವಿಧ ಕಾರಣ ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

ಎಲ್ಲ ಸಿಒಎ ಸದಸ್ಯರುಗಳಿಗೆ 2017ರಲ್ಲಿ ಪ್ರತಿ ತಿಂಗಳಿಗೆ 10 ಲಕ್ಷ ರೂ., 2018 ಹಾಗೂ 2019ರಲ್ಲಿ ಕ್ರಮವಾಗಿ 11 ಲಕ್ಷ ರೂ. ಹಾಗೂ 12 ಲಕ್ಷ ರೂ. ಪಾವತಿಸಲಾಗಿತ್ತು.

ಅಮಿಕ್ಯೂಸ್ ಕ್ಯೂರಿ ಪಿಎಸ್ ನರಸಿಂಹ ಅವರೊಂದಿಗೆ ಚರ್ಚಿಸಿದ ಬಳಿಕ ಮೊತ್ತವನ್ನು ಅಂತಿಮಗೊಳಿಸಲಾಗಿದೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News