ಅಗ್ರ ಸ್ಥಾನ ಭದ್ರಪಡಿಸಿಕೊಂಡ ಟೀಮ್ ಇಂಡಿಯಾ

Update: 2019-10-23 02:49 GMT

ದುಬೈ, ಅ.22: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಸ್ವದೇಶದಲ್ಲಿ ನಡೆದ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ವೈಟ್‌ವಾಶ್ ಮಾಡಿ ಗರಿಷ್ಠ ಅಂಕ ಗಳಿಸಿದ ಬಳಿಕ ಭಾರತ ಈ ಸಾಧನೆ ಮಾಡಿದೆ.

ಭಾರತ ಮೂರನೇ ಹಾಗೂ ಅಂತಿಮ ಟೆಸ್ಟ್‌ನ ನಾಲ್ಕನೇ ದಿನವಾದ ಮಂಗಳವಾರ ಪಂದ್ಯವನ್ನು ಇನಿಂಗ್ಸ್ ಹಾಗೂ 202 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ‘‘ಎರಡು ಪಂದ್ಯಗಳ ಸರಣಿಯಲ್ಲಿ ಪ್ರತಿ ಪಂದ್ಯಕ್ಕೆ 60 ಅಂಕಗಳು ಹಾಗೂ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರತಿ ಪಂದ್ಯಕ್ಕೆ 24 ಅಂಕಗಳು ಇರುತ್ತವೆ’’ ಎಂದು ಐಸಿಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.

  ವೆಸ್ಟ್‌ಇಂಡೀಸ್ ವಿರುದ್ಧ ಸರಣಿಯಲ್ಲಿನ 2-0 ಅಂತರದ ಗೆಲುವನ್ನು ಮುಂದುವರಿಸಿದ ಭಾರತ ಇದೀಗ ಸತತ ಎರಡನೇ ಸರಣಿಯನ್ನು ಜಯಿಸಿ ಒಟ್ಟು 240 ಅಂಕ ಪಡೆದಿದೆ. ನ.14ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧ ಸ್ವದೇಶದಲ್ಲಿ ನಡೆಯುವ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಮತ್ತಷ್ಟು ಅಂಕ ಗಳಿಸುವ ಅವಕಾಶವಿದೆ. 2 ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿರುವ ಶ್ರೀಲಂಕಾ ಹಾಗೂ ನ್ಯೂಝಿಲ್ಯಾಂಡ್ ತಲಾ 60 ಅಂಕ ಕಲೆಹಾಕಿವೆ. ಐದು ಪಂದ್ಯಗಳ ಆ್ಯಶಸ್ ಸರಣಿ 2-2ರಿಂದ ಸಮಬಲದಲ್ಲಿ ಕೊನೆಗೊಂಡ ಬಳಿಕ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ತಲಾ 56 ಅಂಕ ಗಳಿಸಿವೆ.

ಲೀಗ್‌ನ ಅಂತ್ಯಕ್ಕೆ ಅಗ್ರ-2 ಸ್ಥಾನ ಪಡೆಯಲಿರುವ ತಂಡಗಳು 2021ರ ಜೂನ್‌ನಲ್ಲಿ ಬ್ರಿಟನ್‌ನಲ್ಲಿ ನಡೆಯುವ ಫೈನಲ್‌ನಲ್ಲಿ ಮುಖಾಮುಖಿ ಯಾಗಲಿವೆ. ವಿಜೇತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ್ನು ಮುಡಿಗೇರಿಸಿಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News