​ಈ ಸಿಕ್ಖ್ ಮುಖಂಡ ಕೆನಡಾದಲ್ಲಿ ಕಿಂಗ್‌ಮೇಕರ್

Update: 2019-10-23 04:24 GMT

ಒಟ್ಟಾವ, ಅ.23: ಕೆನಡಾದಲ್ಲಿ ಪ್ರಧಾನಿ ಜೆಸ್ಟಿನ್ ಟ್ರುದೇವ್ ನೇತೃತ್ವದ ಲಿಬರಲ್ ಪಕ್ಷಕ್ಕೆ ಬಹುಮತ ಬಾರದಿದ್ದರೂ, ಇತರ ಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಅಲ್ಪಮತದ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಸಿಕ್ಖ್ ಮುಖಂಡ, ಮಾನವ ಹಕ್ಕುಗಳ ವಕೀಲ ಜಗ್ಮೀತ್ ಸಿಂಗ್ (40) ನೇತೃತ್ವದ ಎಡಪಂಥೀಯ ನ್ಯೂ ಡೆಮಾಕ್ರಟಿಕ್ ಪಾರ್ಟಿ ಕಿಂಗ್‌ಮೇಕರ್ ಪಾತ್ರ ವಹಿಸಲಿದೆ.

338 ಸ್ಥಾನಗಳ ಹೌಸ್ ಆಫ್ ಕಾಮನ್ಸ್‌ನಲ್ಲಿ ಬಹುಮತಕ್ಕೆ 170 ಸ್ಥಾನಗಳ ಅಗತ್ಯವಿದೆ. ಲಿಬರಲ್ ಪಕ್ಷ 157 ಸ್ಥಾನಗಳನ್ನು ಹೊಂದಿದ್ದು, 13 ಸ್ಥಾನಗಳ ಕೊರತೆ ಇದೆ. ಭಾರತೀಯ ಮೂಲದ ಸಿಂಗ್ ಹೇಳಿಕೆ ನೀಡಿ, "ಕಿಂಗ್ ಮೇಕರ್" ಪಾತ್ರ ನಿರ್ವಹಿಸಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. "ಇದೀಗ ಅಲ್ಪಮತದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದು, ಜತೆಯಾಗಿ ಕೆಲಸ ಮಾಡಬೇಕು ಎಂಬ ವಾಸ್ತವವನ್ನು ಟ್ರುದೇವ್ ಮನವರಿಕೆ ಮಾಡಿಕೊಳ್ಳಲಿದ್ದಾರೆ" ಎಂದು ಹೇಳಿದ್ದಾರೆ.

ಜಗ್ಮೀತ್ ಸಿಂಗ್ ಅವರ ಎನ್‌ಡಿಪಿ 24 ಸ್ಥಾನಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ಸಂಸತ್ತಿನಲ್ಲಿ ಎನ್‌ಡಿಪಿ 44 ಸ್ಥಾನಗಳನ್ನು ಹೊಂದಿದ್ದು, ಲಿಬರಲ್ ಪಾರ್ಟಿ ಮತ್ತು ಎನ್‌ಡಿಪಿ ತಲಾ 20 ಸ್ಥಾನಗಳನ್ನು ಕಳೆದುಕೊಂಡಿವೆ.

ಚುನಾಯಿತ ಪ್ರತಿನಿಧಿಗಳು ಒಟ್ಟಾವದ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ. ಹವಾಮಾನ ಬದಲಾವಣೆ ಸಂಬಂಧ ನೈಜ ಹಾಗೂ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ. ಜತೆಗೆ ಕೆನಡಾ ಬದುಕು ಜನಸಾಮಾನ್ಯರ ಕೈಗೆಟುವಂತೆ ಮಾಡುವುದು ಅಗತ್ಯವಾಗಿದ್ದು, ಅತಿ ಶ್ರೀಮಂತರು ತಮ್ಮ ನ್ಯಾಯಬದ್ಧ ಪಾಲನ್ನು ನೀಡಬೇಕು. ತಮಗಾಗಿ ಕೆಲಸ ಮಾಡುವ ಸರ್ಕಾರವನ್ನು ಕೆನಡಾ ಪ್ರಜೆಗಳು ಬಯಸಿದ್ದಾರೆಯೇ ವಿನಃ ಶ್ರೀಮಂತ ಮತ್ತು ಪ್ರಭಾವಿಗಳನ್ನಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News