ಎಂಸಿಸಿ ಗೌರವ ಅಜೀವ ಸದಸ್ಯರಾಗಿ ಗ್ರೇಮ್ ಸ್ಮಿತ್ ಆಯ್ಕೆ

Update: 2019-10-23 08:42 GMT

ಲಂಡನ್, ಅ.23: ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್‌ನ(ಎಂಸಿಸಿ)ಗೌರವ ಅಜೀವ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಎಂಸಿಸಿ ತನ್ನ ಟ್ವಿಟರ್‌ನ ಮೂಲಕ ಈ ವಿಚಾರವನ್ನು ಬಹಿರಂಗಪಡಿಸಿದೆ.

ಸ್ಮಿತ್ ತನ್ನ ದೇಶದ ಪರ ಪರ ಯಶಸ್ವಿ ಏಕದಿನ ಕ್ರಿಕೆಟರ್ ಆಗಿ ಗುರುತಿಸಿಕೊಂಡಿದ್ದರು. 10 ಶತಕಗಳ ಸಹಿತ 6,989 ರನ್ ಗಳಿಸಿದ್ದಾರೆ. ‘‘ಈ ಅಮೂಲ್ಯ ಗೌರವ ನೀಡಿರುವ ಎಂಸಿಸಿಗೆ ಧನ್ಯವಾದ ಅರ್ಪಿಸುವೆ. ಅಲ್ಲಿ ನನಗೆ ಅದ್ಭುತ ನೆನಪುಗಳಿದ್ದವು. ಭವಿಷ್ಯದಲ್ಲಿ ಮತ್ತಷ್ಟನ್ನು ಹಂಚಿಕೊಳ್ಳಲು ನಾನು ಹುಮ್ಮಸ್ಸಿನಲ್ಲಿದ್ದೇವೆ’’ ಎಂದು ಸ್ಮಿತ್ ಟ್ವೀಟ್ ಮಾಡಿದರು.

 ಅತ್ಯಂತ ಕಿರಿಯ ವಯಸ್ಸಿನಲ್ಲಿ(22)ದಕ್ಷಿಣ ಆಫ್ರಿಕಾ ನಾಯಕನಾಗಿದ್ದ ಸ್ಮಿತ್ ಟೆಸ್ಟ್ ವೃತ್ತಿಜೀವನದಲ್ಲಿ 27 ಶತಕಗಳ ಸಹಿತ 9,265 ರನ್ ಕಲೆ ಹಾಕಿದ್ದರು.

2004ರಲ್ಲಿ ವರ್ಷದ ವಿಸ್ಡನ್ ಕ್ರಿಕೆಟಿಗನಾಗಿ ಆಯ್ಕೆಯಾಗಿದ್ದ ಸ್ಮಿತ್ ಐಸಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ 2008ರಲ್ಲಿ ಶತಕ ಸಿಡಿಸಿದ್ದಕ್ಕೆ ಗೌರವ ಪಡೆದಿದ್ದರು. 2003ರಲ್ಲಿ ಇಂಗ್ಲೆಂಡ್‌ಗೆ ತೆರಳಿದ್ದ ತನ್ನ ಮೊದಲ ಪ್ರವಾಸದಲ್ಲಿ ಮೊದಲೆರಡು ಟೆಸ್ಟ್‌ಗಳಲ್ಲಿ ಎರಡು ದ್ವಿಶತಕ ಸಿಡಿಸಿ ಗಮನ ಸೆಳೆದಿದ್ದರು. ಲಾರ್ಡ್ಸ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್(259)ಗಳಿಸಿದ್ದ ಸ್ಮಿತ್ ಆಸೀಸ್ ಲೆಜೆಂಡ್ ಸರ್ ಡೊನಾಲ್ಡ್ ಬ್ರಾಡ್ಮನ್ ಅವರ 73 ವರ್ಷಗಳ ಹಳೆಯ ದಾಖಲೆ ಮುರಿದಿದ್ದರು.

ಆಸ್ಟ್ರೇಲಿಯದ ಮಾಜಿ ಆಫ್-ಸ್ಪಿನ್ನರ್ ಟಿಮ್ ಮೇ ಕೂಡ ಕ್ರಿಕೆಟ್‌ಗೆ ನೀಡಿದ್ದ ಅಮೂಲ್ಯ ಕೊಡುಗೆಗಾಗಿ ಗೌರವ ಆಜೀವ ಸದಸ್ಯತ್ವ ಪಡೆದಿದ್ದಾರೆ. ಪಾಲ್ ಕಾಲಿಂಗ್‌ವುಡ್, ಎಬಿಡಿ ವಿಲಿಯರ್ಸ್, ಮಿಚೆಲ್ ಜಾನ್ಸನ್ ಹಾಗೂ ಅಡ್ರಿಯನ್ ಮೊರ್ಗನ್ ಈ ವರ್ಷ ಎಂಸಿಸಿ ಗೌರವ ಆಜೀವ ಸದಸ್ಯತ್ವವನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News