17 ರಾಜ್ಯಗಳ ವಿಧಾನಸಭಾ ಉಪಚುನಾವಣೆ: ಬಿಜೆಪಿಗೆ 16; ಕಾಂಗ್ರೆಸ್‌ಗೆ 7

Update: 2019-10-24 18:48 GMT

 ಹೊಸದಿಲ್ಲಿ, ಅ. 24: ಐದು ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿದ ಬಿಜೆಪಿ ಗುರುವಾರ 17 ರಾಜ್ಯಗಳ 51 ವಿಧಾನ ಸಭಾ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ 16 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಕಾಂಗ್ರೆಸ್ 7 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ.

ಮೇಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸಂಪೂರ್ಣವಾಗಿ ಸೋತು ಹೋಗಿದ್ದ ಕಾಂಗ್ರೆಸ್ ಅಕ್ಟೋಬರ್ 21ರಂದು ನಡೆದ ಉಪ ಚುನಾವಣೆಯಲ್ಲಿ 11 ಸ್ಥಾನಗಳನ್ನು ಪಡೆದುಕೊಂಡಿದೆ.

ಉತ್ತರಪ್ರದೇಶದ 11 ವಿಧಾನ ಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ 7, ಬಿಜೆಪಿ ಮಿತ್ರ ಪಕ್ಷ ಆಪ್ನಾ ದಳ್ 1 ಹಾಗೂ ಸಮಾಜವಾದಿ ಪಕ್ಷ 3 ಸ್ಥಾನಗಳನ್ನು ಪಡೆದುಕೊಳ್ಳುವಲ್ಲಿ ಸಫಲವಾಗಿವೆ.

 ಆಡಳಿತಾರೂಢ ಬಿಜೆಪಿ ಗಂಗೋಹ್, ಇಗ್ಲಾಸ್, ಲಕ್ನೋ ಕೆಂಟ್, ಗೋವಿಂದ್ ನಗರ್, ಮಾಣಿಕ್‌ಪುರ, ಬಲ್ಹಾ ಹಾಗೂ ಘೋಸಿಯಲ್ಲಿ ಜಯ ಸಾಧಿಸಿದೆ. ಆಪ್ನಾ ದಳ್‌ನ ಅಭ್ಯರ್ಥಿ ಪ್ರತಾಪ್‌ಗಢದಿಂದ ಜಯ ಗಳಿಸಿದ್ದಾರೆ.

 ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ ಸಮಾಜವಾದಿ ಪಕ್ಷದ ಹಿರಿಯ ನಾಯಕ ಹಾಗೂ ಲೋಕಸಭಾ ಸದಸ್ಯ ಅಝಂ ಖಾನ್ ಅವರ ಪತ್ನಿ ಹಾಗೂ ರಾಜ್ಯಸಭಾ ಸದಸ್ಯೆ ತಝೀನ್ ಫಾತಿಮಾ ರಾಮಪುರ ಕ್ಷೇತ್ರದಲ್ಲಿ ಬಿಜೆಪಿಯ ಭಾರತ್ ಭೂಷಣ್ ಅವರನ್ನು ಸೋಲಿಸಿದ್ದಾರೆ.

  ಝೈದ್‌ಪುರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಗೌರವ್ ಕುಮಾರ್ ಬಿಜೆಪಿಯ ತನ್ನ ಪ್ರತಿಸ್ಪರ್ಧಿ ಅಂಬರೀಶ್ ಅವರನ್ನು ಪರಾಭವಗೊಳಿಸಿದ್ದಾರೆ. ಜಲಾಲ್‌ಪುರದಲ್ಲಿ ಪಕ್ಷದ ಸುಭಾಶ್ ರಾಯ್ ಬಿಎಸ್ಪಿಯ ಚಾಯಾ ವರ್ಮಾ ಅವರನ್ನು ಸೋಲಿಸಿದ್ದಾರೆ.

ಬಿಹಾರದ ಸಿಮ್ರಿ-ಭಕ್ತಿಯಾರ್‌ಪುರ ಹಾಗೂ ಬೆಲ್ಹಾರ್ ಕ್ಷೇತ್ರಗಳಲ್ಲಿ ಆರ್‌ಜೆಡಿ ಜಯ ಗಳಿಸಿದೆ. ಎಐಎಂಐಎಂ ಖಮರುಲ್ ಹೂಡಾ ಕೃಷ್ಣಗಂಜ್ ಕ್ಷೇತ್ರದಲ್ಲಿ ಹಾಗೂ ಆಡಳಿತಾ ರೂಢ ಜೆಡಿಯು ನಾಥ್‌ನಗರ ಕ್ಷೇತ್ರದಲ್ಲಿ ಜಯ ಗಳಿಸಿದೆ. ಸ್ವತಂತ್ರ ಅಭ್ಯರ್ಥಿ ಕರಣಜೀತ್ ಸಿಂಗ್ ಆಲಿಯಾಸ್ ವ್ಯಾಸ್ ಸಿಂಗ್ ದಾರಾವುಂದಾ ಕ್ಷೇತ್ರದಿಂದ ಜಯ ಗಳಿಸಿದ್ದಾರೆ.

  ಗುಜರಾತ್‌ನಲ್ಲಿ 6 ವಿಧಾನ ಸಭಾ ಕ್ಷೇತ್ರಗಳಿದ್ದು, ಬಿಜೆಪಿ ಖೆರಾಲು ಹಾಗೂ ಲುನವಾಡ ಕ್ಷೇತ್ರದಲ್ಲಿ ಜಯ ಗಳಿಸಿದೆ ಹಾಗೂ ಅಮ್ರೈವಾಡಿಯಲ್ಲಿ ಮುನ್ನಡೆ ಸಾಧಿಸಿದೆ. ಉಳಿದ ಮೂರು ಕ್ಷೇತ್ರಗಳಾದ ತರಾದ್, ಬಯಾದ್ ಹಾಗೂ ರಾಧಾನಪುರದಲ್ಲಿ ಕಾಂಗ್ರೆಸ್ ಜಯ ಗಳಿಸಿದೆ.

ಅಸ್ಸಾಂನ ರತಬರಿ, ರಂಗಪಾರ ಹಾಗೂ ಸೋನಾರಿ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿದೆ. ಜೆನಿಯಾ ಕ್ಷೇತ್ರದಲ್ಲಿ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ ಜಯ ಸಾಧಿಸಿದೆ.

ಸಿಕ್ಕಿಂನ ಮಾರ್ತಮ್ರುತೇಕ್ ಹಾಗೂ ಗ್ಯಾಂಗ್ಟಕ್ ಕ್ಷೇತ್ರದಲ್ಲಿ ಬಿಜೆಪಿ ಜಯ ಗಳಿಸಿದೆ. ಪೊಕ್ಲೋಕ್ ಕಾಮರಂಗ್‌ನಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಜಯ ಸಾಧಿಸಿದೆ.

ಹಿಮಾಚಲ ಪ್ರದೇಶದ ದರ್ಮಶಾಲ ಹಾಗೂ ಪಚ್ಚಾಡ್ ಕ್ಷೇತ್ರದಲ್ಲಿ ಬಿಜೆಪಿ ಜಯ ಗಳಿಸಿದೆ. ಅರುಣಾಚಲಪ್ರದೇಶದ ಖೋನ್ಸಾ ಪಶ್ಚಿಮ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಛಕಾತ್ ಅಬೋಹ್ ಜಯ ಗಳಿಸಿದ್ದಾರೆ.

 ಪಂಜಾಬ್‌ನ ನಾಲ್ಕು ಕ್ಷೇತ್ರಗಳಲ್ಲಿ ಫಗ್ವಾರ, ಮುಕೇರಿಯನ್ ಹಾಗೂ ಜಲಾಲಾಬಾದ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ಆದರೆ, ದಾಖಾ ಕ್ಷೇತ್ರದಲ್ಲಿ ಸೋಲು ಕಂಡಿದೆ.

ರಾಜಸ್ಥಾನದಲ್ಲಿ ಮಾಂಡಾವ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ಆದರೆ, ಖಿಂವ್‌ಸಾರ್‌ಲ್ಲಿ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ಎದುರು ಸೋತಿದೆ.

  ರಾಜಸ್ಥಾನದ ಮಾಂಡವಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಗಳಿಸಿದೆ. ಆದರೆ, ಖಿನ್ವಾಸರ್‌ನಲ್ಲಿ ಪರಭಾವಗೊಂಡಿದೆ.

ಚತ್ತೀಸ್‌ಗಢದ ಚಿತ್ರಕೂಟ ಕ್ಷೇತ್ರದಲ್ಲಿ ಕಾಂಗ್ರೆಸ್ ವಿಜಯ ದಾಖಲಿಸಿದೆ. ಮಧ್ಯಪ್ರದೇಶದ ಝಬುವಾ ಕ್ಷೇತ್ರದಲ್ಲಿ ಕೂಡ ಕಾಂಗ್ರೆಸ್ ಜಯ ಗಳಿಸಿದೆ.

ಕೇರಳದ ಐದು ವಿಧಾನ ಸಭಾ ಕ್ಷೇತ್ರಗಳಲ್ಲಿ ಎರಡು ಕ್ಷೇತ್ರಗಳಾದ ಎರ್ನಾಕುಳಂ ಹಾಗೂ ಅರೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ಕೊನಿ ಹಾಗೂ ವೆಟ್ಟಿಯೂರ್‌ಕಾವ್‌ನಲ್ಲಿ ಸಿಪಿಐಎಂ ಜಯ ಗಳಿಸಿದೆ. ಮೇಘಾಲಯದ ಶೆಲ್ಲಾ ಕ್ಷೇತ್ರದಲ್ಲಿ ಯುನೈಟೆಡ್ ಡೆಮಾಕ್ರೆಟಿಕ್ ಪಾರ್ಟಿ ಜಯ ಗಳಿಸಿದೆ. ಒಡಿಶ್ಶಾದ ಬಿಜೇಪುರ ಕ್ಷೇತ್ರದಲ್ಲಿ ಬಿಜು ಜನತಾದಳ ಜಯ ಸಾಧಿಸಿದೆ.

ಪುದುಚೇರಿ ಕಾಮರಾಜ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎ. ಜೋಹನ್‌ಕುಮಾರ್ ಜಯ ಗಳಿಸಿದ್ದಾರೆ. ತಮಿಳುನಾಡಿನ ವಿಕ್ರವಾಂಡಿ ಹಾಗೂ ನಂಗುನೇರಿಯಲ್ಲಿ ಕೂಡ ಕಾಂಗ್ರೆಸ್ ಜಯ ಸಾಧಿಸಿದೆ. ತೆಲಂಗಾಣದ ಹಜೂರ್‌ನಗರ್‌ನಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ ಜಯ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News