ಫ್ರೆಂಚ್ ಓಪನ್: ಸೈನಾ ಸವಾಲು ಅಂತ್ಯ

Update: 2019-10-26 05:48 GMT

ಪ್ಯಾರಿಸ್,ಅ.25: ಕೊರಿಯಾದ ಆ್ಯನ್ ಸೆ ಯಂಗ್ ವಿರುದ್ಧ ಮಹಿಳೆಯರ ಸಿಂಗಲ್ಸ್ ನ ಕ್ವಾರ್ಟರ್‌ಫೈನಲ್‌ನಲ್ಲಿ ನೇರ ಗೇಮ್‌ಗಳ ಅಂತರದಿಂದ ಸೋಲುಂಡಿರುವ ಸೈನಾ ನೆಹ್ವಾಲ್ 7,00,000 ಡಾಲರ್ ಬಹುಮಾನ ಮೊತ್ತದ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ನಿರ್ಗಮಿಸಿದ್ದಾರೆ.

 ಇಲ್ಲಿ ಶುಕ್ರವಾರ 49 ನಿಮಿಷಗಳಲ್ಲಿ ಕೊನೆಗೊಂಡ ರೋಚಕ ಪ್ರಿ-ಕ್ವಾರ್ಟರ್ ಫೈನಲ್ ಫೈಟ್‌ನಲ್ಲಿ 29ರ ಹರೆಯದ ಸೈನಾ ಅವರು ಯಂಗ್ ವಿರುದ್ಧ 20-22, 21-23 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಈ ವರ್ಷದ ಎಪ್ರಿಲ್‌ನಲ್ಲಿ ಏಶ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಅಂತಿಮ-8ರ ಹಂತ ತಲುಪಿದ ಬಳಿಕ ಮೊದಲ ಬಾರಿ ಸೈನಾ ಕ್ವಾರ್ಟರ್ ಫೈನಲ್‌ನಲ್ಲಿ ಕಾಣಿಸಿಕೊಂಡಿದ್ದರು.

 ಈ ವರ್ಷದ ಜನವರಿಯಲ್ಲಿ ಇಂಡೋನೇಶ್ಯ ಮಾಸ್ಟರ್ಸ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿರುವ ಸೈನಾ ಅವರು ಚೀನಾ, ಕೊರಿಯಾ ಹಾಗೂ ಡೆನ್ಮಾರ್ಕ್ ಓಪನ್ ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದರು.

ಸೈನಾ ಮೊದಲ ಗೇಮ್‌ನ ಆರಂಭದಲ್ಲೇ ಯಂಗ್‌ಗೆ 7-2 ಮುನ್ನಡೆ ಬಿಟ್ಟುಕೊಟ್ಟರು. ಆ ಬಳಿಕ ನಿಧಾನವಾಗಿ ತಿರುಗೇಟು ನೀಡಿದರು. ಒಂದು ಹಂತದಲ್ಲಿ ಸ್ವಲ್ಪ ಹೊತ್ತು 15-12 ಮುನ್ನಡೆ ಪಡೆದಿದ್ದ ಸೈನಾ ಕೊರಿಯಾ ಆಟಗಾರ್ತಿಗೆ ಮೊದಲ ಗೇಮ್‌ನ್ನು 20-22 ಅಂತರದಿಂದ ಸೋತರು.

ಎರಡನೇ ಗೇಮ್‌ನಲ್ಲಿ ಯಂಗ್ ಮತ್ತೊಮ್ಮೆ ಆರಂಭದಲ್ಲಿ 5-2 ಲೀಡ್ ಪಡೆದಿದ್ದರು. ಅನುಭವಿ ಆಟಗಾರ್ತಿ ಸೈನಾ 18-18ರಿಂದ ಸಮಬಲ ಸಾಧಿಸಿದರು. ಆದರೆ ಯಂಗ್ ಎರಡು ಮ್ಯಾಚ್ ಪಾಯಿಂಟ್ ಪಡೆದು ತಿರುಗೇಟು ನೀಡಿದರು. ಮೂರು ಬ್ರೇಕ್‌ಪಾಯಿಂಟ್ ಪಡೆದ ಸೈನಾ 21-20 ಅಂತರದಿಂದ ಮುನ್ನಡೆ ಪಡೆದರು. ಮತ್ತೊಮ್ಮೆ ತಿರುಗಿ ಬಿದ್ದ ಯಂಗ್ 23-21 ಅಂತರದಿಂದ ರೋಚಕವಾಗಿ 2ನೇ ಗೇಮ್ ಗೆದ್ದುಕೊಂಡರು.

2012ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಫೈನಲ್ ತಲುಪಲು ಸಮರ್ಥವಾಗಿದ್ದ ಸೈನಾ ಅಕ್ಟೋಬರ್ 29ರಿಂದ ಆರಂಭವಾಗಲಿರುವ ಸಾರ್ಲೊಲುಕ್ಸ್ ಓಪನ್‌ನಲ್ಲಿ ಭಾಗವಹಿಸಲಿದ್ದಾರೆ.

ಸಾತ್ವಿಕ್‌ಸಾಯಿರಾಜ್-ಚಿರಾಗ್ ಸೆಮಿ ಫೈನಲ್‌ಗೆ

ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಫ್ರೆಂಚ್ ಓಪನ್ ಟೂರ್ನಮೆಂಟ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಕಿಮ್ ಅಸ್ಟ್ರಪ್ ಹಾಗೂ ಆಂಡರ್ಸ್ ಸ್ಕಾರುಪ್ ರಸ್ಮುಸ್ಸನ್‌ರನ್ನು 21-13, 22-20 ಗೇಮ್‌ಗಳ ಅಂತರದಿಂದ ಮಣಿಸಿ ಸೆಮಿ ಫೈನಲ್ ತಲುಪಿದರು.

ಗುರುವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸಾತ್ವಿಕ್-ಚಿರಾಗ್ ಮೂರು ಬಾರಿಯ ವಿಶ್ವ ಚಾಂಪಿಯನ್ನರಿಗೆ ಶಾಕ್ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News