ಮಮತಾ ಬ್ಯಾನರ್ಜಿ ಮನೆಯ ಕಾಳಿ ಪೂಜೆಗೆ ವಿಶೇಷ ಅತಿಥಿ ಯಾರು ಗೊತ್ತೇ ?

Update: 2019-10-28 04:23 GMT

ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಮನೆಯಲ್ಲಿ ರವಿವಾರ ನಡೆದ ಕಾಳಿ ಪೂಜೆಗೆ ಜಗದೀಪ್ ಧನಕರ್, ಪತ್ನಿ ಸಮೇತಾಗಿ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಸುಮಾರು ಒಂದು ಗಂಟೆ ಕಾಲ ಮುಖ್ಯಮಂತ್ರಿ, ಸಂಪುಟ ಸಹೋದ್ಯೋಗಿಗಳು ಹಾಗೂ ಅತಿಥಿಗಳ ಜತೆ ರಾಜ್ಯಪಾಲರು ಮಾತುಕತೆ ನಡೆಸಿದರು. ಕಾಳಿಪೂಜೆಯನ್ನು ವೀಕ್ಷಿಸಿದ ಅವರು ಕಾಳಿ ಪ್ರತಿಮೆ ಮುಂದೆ ವಿಶೇಷ ಪ್ರಾರ್ಥನೆ ನೆರವೇರಿಸಿದರು.

ದಕ್ಷಿಣ ಕೊಲ್ಕತ್ತಾದ ಕಾಳಿಘಾಟ್‌ನಲ್ಲಿರುವ ದೀದಿಯವರ ಮನೆಯ ಮುಂದೆ ಹಾಕಿದ್ದ ಪೆಂಡಾಲ್‌ಗೆ ಮಾಧ್ಯಮದವರಿಗೆ ಪ್ರವೇಶ ಇಲ್ಲದಿದ್ದರೂ, ರಾಜ್ಯಪಾಲರು ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರನ್ನು ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿರುವುದು ಕಂಡುಬಂತು. ಟಿಎಂಸಿಯ ಹಲವು ಮುಖಂಡರು ಹಾಗೂ ಅಧಿಕಾರಿಗಳಿಗೆ ರಾಜ್ಯಪಾಲರನ್ನು ಮುಖ್ಯಮಂತ್ರಿ ಔಪಚಾರಿಕವಾಗಿ ಪರಿಚಯಿಸಿದರು.

ರಾಜಭವನ ಹಾಗೂ ಆಡಳಿತಾರೂಢ ಟಿಎಂಸಿ ಮುಖಂಡರ ನಡುವೆ ಹಲವು ದಿನಗಳಿಂದ ಸಂಘರ್ಷ ಏರ್ಪಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ಭೇಟಿಗೆ ವಿಶೇಷ ಮಹತ್ವ ಬಂದಿದೆ. ಜುಲೈ 30ರಂದು ಅಧಿಕಾರ ವಹಿಸಿಕೊಂಡ ಧನಕರ್, ಸೆಪ್ಟೆಂಬರ್ 19ರಂದು ಕೇಂದ್ರ ಸಚಿವ ಬಬೂಲ್ ಸುಪ್ರಿಯೊ ಅವರಿಗೆ ಜಾಧವಪುರ ವಿವಿ ವಿದ್ಯಾರ್ಥಿಗಳು ಮುತ್ತಿಗೆ ಹಾಕಿದಾಗ ಅವರನ್ನು ರಕ್ಷಿಸುವ ಸಲುವಾಗಿ ಕ್ಯಾಂಪಸ್‌ಗೆ ಧಾವಿಸಿ ಸುದ್ದಿಮಾಡಿದ್ದರು.

ಬಳಿಕ ಜಿಯಾಗಂಜ್ ತ್ರಿವಳಿ ಹತ್ಯೆ ಘಟನೆ ಸಂಬಂಧ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದರು. ತೃಣಮೂಲ ಕಾಂಗ್ರೆಸ್ ಮುಖಂಡರು, ಅದರಲ್ಲೂ ಮುಖ್ಯವಾಗಿ ಶಿಕ್ಷಣ ಸಚಿವರು, ರಾಜ್ಯಪಾಲರ ವರ್ತನೆ ಹದ್ದುಮೀರಿದೆ ಎಂದು ಟೀಕಿಸಿದ್ದರು.

ಆದರೆ ರವಿವಾರ ಚಿತ್ರಣ ಸಂಪೂರ್ಣ ಬದಲಾಗಿದ್ದು, "ಬ್ಯಾನರ್ಜಿ ಮನೆಯಲಿ ಕಾಳಿಪೂಜೆ 1978ರಿಂದ ನಡೆಯುತ್ತಿದೆ. ನನಗೆ ಹಾಗೂ ಪತ್ನಿಗೆ ಅತೀವ ಸಂತಸವಾಗುತ್ತಿದೆ. ನಾವು ಪೂಜೆಗಾಗಿ ಮುಖ್ಯಮಂತ್ರಿ ಮನೆಗೆ ಭೇಟಿ ನೀಡುತ್ತೇವೆ" ಎಂದು ರಾಜ್ಯಪಾಲರು ಹೇಳಿದ್ದರು.

ಮಮತಾ ಮನೆಗೆ ಭೇಟಿ ನೀಡಲು ರಾಜ್ಯಪಾಲರು ಭಾಯ್‌ಪೋತ್ನಾ (ಸಹೋದರ- ಸಹೋದರಿಯರ ವಿಶೇಷ ದಿನ) ದಿನವನ್ನೇ ಆಯ್ಕೆ ಮಾಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News