ಗುಂಪು ಥಳಿತದ ವಿರುದ್ಧ ಕಾನೂನು ಮಾತ್ರ ಸಾಲದು

Update: 2019-10-28 18:27 GMT

ಇತ್ತೀಚೆಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ(ಎನ್‌ಸಿಆರ್‌ಬಿ) ಬಿಡುಗಡೆ ಮಾಡಿದ ದತ್ತಾಂಶಗಳಲ್ಲಿ ಗುಂಪು ಥಳಿತಕ್ಕೆ ಸಂಬಂಧಿಸಿದ ಅಂಕಿ ಸಂಖ್ಯೆಗಳು ಇಲ್ಲದಿರುವುದಕ್ಕೆ ನೀಡಲಾಗಿರುವ ಕಾರಣ ಹೇಗಿದೆ:

ರಾಜ್ಯಗಳಿಂದ ನೀಡಲಾಗಿರುವ ಅಂಕಿ ಸಂಖ್ಯೆಗಳು, ದತ್ತಾಂಶ ‘‘ನಂಬಲರ್ಹವಲ್ಲ’’ ಇದು ದತ್ತಾಂಶಗಳನ್ನು ಮುಚ್ಚಿಡುವ ಉದ್ದೇಶ ಪೂರ್ವಕವಾದ ಒಂದು ಪ್ರಯತ್ನವಲ್ಲ. ಬೇರೆ ಏನೂ ಅಲ್ಲ.

ಇತರ ಹಲವು ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ 63 ಗುಂಪು ಥಳಿತ (ಲಿಂಚಿಂಗ್) ಪ್ರಕರಣಗಳಲ್ಲಿ, 2010-2017ರ ನಡುವೆ, 28 ಮಂದಿ ಕೊಲ್ಲಲ್ಪಟ್ಟರು. ಇವರಲ್ಲಿ 24 ಮಂದಿ ಮುಸ್ಲಿಮರು. 2014ರಿಂದ ಇಲ್ಲಿಯವರೆಗೆ 266 ಲಿಂಚಿಂಗ್ ಪ್ರಕರಣಗಳು ನಡೆದಿವೆ ಮತ್ತು ಇದು ಏರುತ್ತಲೇ ಇದೆ. ಅಂತಹ ಪ್ರಕರಣಗಳನ್ನು ತಡೆಯುವಲ್ಲಿ ಪೊಲೀಸರು ವಹಿಸುವ ಪಾತ್ರ ಇದು ಅನುಮಾನ ಮೂಡಿಸುತ್ತದೆ. ಜೂನ್ 17ರ ರಾತ್ರಿ ತಬ್ರೆಝ್ ಅನ್ಸಾರಿ, ಇತರ ಇಬ್ಬರ ಜೊತೆ ಜಮ್‌ಶದ್‌ಪುರದಿಂದ ಸರೈಕಲಾದಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದರು. ಆಗ ಧತ್‌ಕಿದಿಹ್ ಎಂಬ ಹಳ್ಳಿಯಲ್ಲಿ ಅವರನ್ನು ಕಳ್ಳರೆಂದು ಅನುಮಾನಿಸಿ ಗೂಂಡಾಗಳು ಅವರ ಮೇಲೆ ದಾಳಿ ನಡೆಸಿದರು. ಅನ್ಸಾರಿಯ ಇಬ್ಬರು ಗೆಳೆಯರು ತಪ್ಪಿಸಿಕೊಂಡು ಓಡಿ ಹೋದರು. ಆದರೆ ಅನ್ಸಾರಿಯನ್ನು ಕಂಬವೊಂದಕ್ಕೆ ಕಟ್ಟಿಹಾಕಿ ಬರ್ಬರವಾಗಿ ಥಳಿಸಲಾಯಿತು. ಗುಂಪು ಹಲವು ಗಂಟೆಗಳ ಕಾಲ ಆತನನ್ನು ಥಳಿಸಿತು. ಪೊಲೀಸರು ತಡವಾಗಿ ಬಂದು ಅನ್ಸಾರಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿಂದ ಅವರನ್ನು ಆಸ್ಪತ್ರೆಯೊಂದಕ್ಕೆ ಕೊಂಡು ಹೋದರು. ವೈದ್ಯಕೀಯ ಪರೀಕ್ಷೆಯ ಬಳಿಕ ವೈದ್ಯರು ಅವರನ್ನು ವೈದ್ಯಕೀಯವಾಗಿ ಚೆನ್ನಾಗಿದ್ದಾನೆ. (ಮೆಡಿಕಲಿ ಫಿಟ್) ಎಂದು ಹೇಳಿದರು. ನಾಲ್ಕು ದಿನಗಳ ಬಳಿ ಮೆದುಳಿನ ರಕ್ತಸ್ರಾವದಿಂದ ತಬ್ರೆಝ್ ಮೃತಪಟ್ಟರು. ಪೊಲೀಸರು ಸುದ್ದಿ ತಿಳಿದ ತಕ್ಷಣ ಕ್ರಮ ಕೈಗೊಂಡಿದ್ದರೆ ಅವರ ಪ್ರಾಣ ಉಳಿಸಬಹುದಿತ್ತು. ಸರೈಕೆಲಾ ಘಟನೆ ನಡೆಯುವುದಕ್ಕೆ ಸರಿಯಾಗಿ ಒಂದು ವರ್ಷದ ಮೊದಲು ಖಾಸಿಮ್ ಖುರೇಶಿ ಮತ್ತು ಸಮಿಉದ್ದಿನ್‌ರವರನ್ನು ಹಾಪುರ್ ಎಂಬಲ್ಲಿ ಬರ್ಬರವಾಗಿ ಥಳಿಸಲಾಯಿತು. ದಾಳಿಯಲ್ಲಿ ಖುರೇಶಿ ಮೃತಪಟ್ಟರು. ಸಮಿಉದ್ದಿನ್‌ಗೆ ಗಂಭೀರ ಸ್ವರೂಪದ ಗಾಯಗಳಾದವು. ಥಳಿಸಿದ ಗುಂಪಿನಲ್ಲಿ ಕೆಲವು ಮಂದಿ ಪೊಲೀಸರು ಕೂಡ ಇದ್ದರೆಂದು ಅನುಮಾನಿಸಲಾಗಿದೆ.

ಪೊಲೀಸರ ಥಳಿತಕ್ಕೊಳಗಾದ ಆ ಇಬ್ಬರನ್ನು ಪೊಲೀಸ್ ವಾಹನಕ್ಕೆ ಎಳೆದೊಯ್ದ ರೀತಿಯ ಬಗ್ಗೆ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಕ್ಷಮೆ ಯಾಚಿಸಿದರಾದರೂ, ಪೊಲೀಸರು ಅವರನ್ನು ನಡೆಸಿಕೊಂಡ ರೀತಿ, ಪೊಲೀಸರಿಗೆ ಆ ಇಬ್ಬರ ಬಗ್ಗೆ ಎಂತಹ ಭಾವನೆ ಇತ್ತು ಎಂಬುದನ್ನು ಸೂಚಿಸುತ್ತದೆ. ಇಡೀ ಪ್ರಕರಣ ಒಂದು ರಸ್ತೆ ಅಪಘಾತವೆಂದು ಹೇಳಿ ಪೊಲೀಸರು ಅದನ್ನು ಮುಚ್ಚಿಹಾಕಲು ಪ್ರಯತ್ನಿಸಿದರು. ಅಪರಾಧಿಗಳ ವಿರುದ್ಧ ಪ್ರಬಲವಾದ ಮೊಕದ್ದಮೆ ಹೂಡಲು ಬೇಕಾಗಿದ್ದ ಸಾಕ್ಷಿಗಳನ್ನು ರಕ್ಷಿಸಲು ಕೂಡ ಪೊಲೀಸರು ಸರಿಯಾದ ಪ್ರಯತ್ನ ಮಾಡಲಿಲ್ಲ. ಗುಂಪು ಥಳಿತದ ಹೆಚ್ಚಿನ ಪ್ರಕರಣಗಳಲ್ಲಿ ಪೊಲೀಸರು ಪಕ್ಷಪಾತ ಧೋರಣೆಯನ್ನು ಅನುಸರಿಸಿದ್ದಾರೆಂಬುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲವಾದರೂ, ಪೊಲೀಸರು ತಕ್ಷಣ ಸರಿಯಾದ ಕ್ರಮ ತೆಗೆದುಕೊಂಡು ಗುಂಪು ಥಳಿತ ಪ್ರಕರಣಗಳನ್ನು ತಡೆದಿರುವ ಉದಾಹರಣೆಗಳೂ ಇವೆ. ಕಳೆದ ವರ್ಷ ಮೇ 22ರಂದು ಉತ್ತರಾಖಂಡ್‌ನ ರಾಮ್‌ನಗರದ ಗರ್ಜಿಯಾ ದೇವಿ ದೇವಸ್ಥಾನದ ಬಳಿ ಮುಸ್ಲಿಂ ಯುವಕನೊಬ್ಬನನ್ನು ಗುಂಪು ಥಳಿತದಿಂದ ಬಚಾವ್ ಮಾಡಿದ ಕೀರ್ತಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಗಗನ್‌ದೀಪ್ ಸಿಂಗ್‌ರವರಿಗೆ ಸಲ್ಲುತ್ತದೆ.

ಗುಂಪು ಥಳಿತದ ವಿರುದ್ಧ ಕಠಿಣವಾದ ಕಟ್ಟುನಿಟ್ಟಿನ ಕಾನೂನುಗಳನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಹಾಗೂ ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಮಣಿಪುರ ಕಳೆದ ವರ್ಷ ನವೆಂಬರ್‌ನಲ್ಲಿ ಇಂತಹ ಒಂದು ಕಾನೂನನ್ನು ರಚಿಸಿತ್ತು. ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ಇತ್ತೀಚೆಗೆ ಈ ಕಾನೂನನ್ನು ರಚಿಸಿವೆ.

ಪಶ್ಚಿಮ ಬಂಗಾಲದ ಕಾನೂನು, ವ್ಯಕ್ತಿಯೊಬ್ಬನನ್ನು ಗುಂಪು ಥಳಿತದಿಂದ ಹತ್ಯೆಗೈದಲ್ಲಿ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ನೀಡಲಾಗುತ್ತದೆ ಎಂದಿದೆ. ಆದರೆ ಈ ಕಾನೂನನ್ನು ಇಂತಹ ಕಾನೂನು ವ್ಯರ್ಥವಾಗುತ್ತದೆ. ಮೂಲಭೂತವಾದಿ ಶಕ್ತಿಗಳಿಗೆ ರಾಜಕೀಯ ಆಶ್ರಯ, ಬೆಂಬಲ ದೊರಕಿದಲ್ಲಿ, ಈ ಶಕ್ತಿಗಳು ಪೊಲೀಸರು ಅವರ ಕರ್ತವ್ಯ ನಿರ್ವಹಿಸದಂತೆ ಅವರನ್ನು ತಡೆಯುತ್ತವೆ.

ಅಧಿಕಾರಿಗಳು, ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಉಪೇಕ್ಷೆ ತೋರಿದರೆ, ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಉತ್ತರ ಪ್ರದೇಶ ರಾಜ್ಯ ಕಾನೂನು ಆಯೋಗವು ಸರಕಾರಕ್ಕೆ ಶಿಫಾರಸು ಮಾಡಿದೆ. ಇದರ ಪ್ರಕಾರ ಕರ್ತವ್ಯಲೋಪ ಎಸಗುವ ಜಿಲ್ಲಾ ನ್ಯಾಯಾಧೀಶರಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮೂರು ವರ್ಷಗಳ ಅವಧಿಯ ವರೆಗಿನ ಜೈಲು ಶಿಕ್ಷೆ ಹಾಗೂ ರೂ.5,000ದ ವರೆಗಿನ ದಂಡ ವಿಧಿಸಬಹುದಾಗಿದೆ.

ಸುಳ್ಳು ಸುದ್ದಿ ಸೃಷ್ಟಿಸಿ, ಅದನ್ನು ಹರಡುವವರ ಮೇಲೆ ನಿಗಾ ಇಟ್ಟು, ಅಂತಹ ಸುದ್ದಿ ಹರಡಿ ಗುಂಪು ಥಳಿತ ಅಥವಾ ಹಿಂಸೆಗೆ ಕಾರಣರಾಗುವವರನ್ನು ಬಂಧಿಸಿ ಶಿಕ್ಷಿಸುವುದಲ್ಲದೆ, ಪೊಲೀಸರು ತಮ್ಮ ಗುಪ್ತಚರ ಜಾಲವನ್ನು ವ್ಯಾಪಕವಾಗಿ ಹರಡಬೇಕು. ಕಾನೂನು ಹಾಗೂ ವ್ಯವಸ್ಥೆಯನ್ನು ಹದಗೆಡಿಸುವ ಯಾವುದೇ ವ್ಯಕ್ತಿಗಳ ಯಾವುದೇ ಯೋಜನೆ ಪೊಲೀಸ್ ಕಂಟ್ರೋಲ್ ರೂಮಿಗೆ ಕೆಲವೇ ನಿಮಿಷಗಳಲ್ಲಿ ತಲಪುವಂತೆ ನೋಡಿಕೊಳ್ಳಬೇಕು. ಕೋಮುಗಲಭೆ ಸಾಧ್ಯವಿರುವ ಆಯಕಟ್ಟಿನ ಪ್ರದೇಶಗಳಲ್ಲಿ ವಿಶೇಷ ಪೊಲೀಸ್ ಪಡೆಯನ್ನು ನಿಯೋಜಿಸಬೇಕು.

ಗುಂಪು ಥಳಿತ ಪ್ರಕರಣಗಳ ತ್ವರಿತ ವಿಚಾರಣೆ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಂಡಲ್ಲಿ ಅಂತಹ ಪ್ರಕರಣಗಳು ನಡೆಯ ದಂತೆ ತಡೆಯುವ ನಿಟ್ಟಿನಲ್ಲಿ ಮುಖ್ಯವಾದ ಹೆಜ್ಜೆ ಇಟ್ಟಂತಾಗುತ್ತದೆ. ಸಂತ್ರಸ್ತರನ್ನು ಬೆದರಿಸುವ, ಅವರ ಹೇಳಿಕೆಯನ್ನು ಹಿಂದೆ ಪಡೆಯುವಂತೆ ಅವರ ಮೇಲೆ ಒತ್ತಡಬೀರುವ ಶಕ್ತಿಗಳನ್ನು ಹತ್ತಿಕಬೇಕು. ಸಾಕ್ಷಿಗಳನ್ನು ಹಾಗೂ ಸಂತ್ರಸ್ತರನ್ನು ರಕ್ಷಿಸುವ ಜವಾಬ್ದಾರಿ ಪೊಲೀಸರ ಮೇಲಿದೆ. ಗುಂಪುಥಳಿತವನ್ನು ಜಾಮೀನು ರಹಿತ ಅಪರಾಧವೆಂದು ಘೋಷಿಸಬೇಕು. ಆಪಾದಿತರಿಗೆ ಜಾಮೀನು ಸಿಗದಂತೆ ನೋಡಿ ಕೊಳ್ಳಬೇಕು, ಮೂಕ ಪ್ರೇಕ್ಷಕರಾಗಿ ನಿಲ್ಲುವ ಪೊಲೀಸ್ ಅಧಿಕಾರಿಗಳ ವಿಚಾರಣೆ ನಡೆಸಿ ಅವರಿಗೂ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಕಾನೂನು ಸಫಲವಾಗುತ್ತದೆ.

ಕೃಪೆ: indian express

Writer - ಎಂ.ಪಿ. ನತಾನಿಯಲ್

contributor

Editor - ಎಂ.ಪಿ. ನತಾನಿಯಲ್

contributor

Similar News