ಒಲಿಂಪಿಕ್ಸ್ ಅರ್ಹತೆ ಪಡೆಯಲು ಪಾಕ್ ಹಾಕಿ ತಂಡ ವಿಫಲ

Update: 2019-10-29 04:17 GMT

ಆಮ್‌ಸ್ಟರ್ಡ್ಯಾಮ್, ಅ.28: ಮೂರು ಬಾರಿಯ ಒಲಿಂಪಿಕ್ಸ್ ಹಾಕಿ ಚಾಂಪಿಯನ್ ಪಾಕಿಸ್ತಾನ ತಂಡ ಮುಂದಿನ ವರ್ಷ ಜಪಾನ್‌ನ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಗೆ ಅರ್ಹತೆ ಗಳಿಸಿಕೊಳ್ಳಲು ವಿಫಲವಾಗಿದೆ. ನೆದರ್‌ಲ್ಯಾಂಡ್ ಎದುರು ನಡೆದ ಎರಡನೇ ಅರ್ಹತಾ ಪಂದ್ಯದಲ್ಲಿ ಪಾಕ್ 1-6 ಅಂತರದ ಆಘಾತಕಾರಿ ಸೋಲುಂಡಿದೆ. ಶನಿವಾರ ನಡೆದ ಮೊದಲ ಅರ್ಹತಾ ಪಂದ್ಯದಲ್ಲಿ ಉಭಯ ತಂಡಗಳು 4-4 ಅಂತರದ ಡ್ರಾ ಸಾಧಿಸಿದ್ದವು. ರವಿವಾರ ಎರಡನೇ ಪಂದ್ಯದ ಫಲಿತಾಂಶದೊಂದಿಗೆ ನೆದರ್‌ಲ್ಯಾಂಡ್ ತಂಡ ಸರಾಸರಿಯಲ್ಲಿ 10-5 ಮುನ್ನಡೆ ಸಾಧಿಸಿ ಗೆಲುವಿನ ನಗೆ ಬೀರಿದೆ. ಎರಡನೇ ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿದ ನೆದರ್ಲೆಂಡ್ ತಂಡದ ಪರ ಮಿಂಕ್ ವಾಂಡೆರ್‌ವೀರ್ಡನ್ ಎರಡು ಗೋಲು ಬಾರಿಸಿದರೆ, ಬ್ಯೋನ್ ಕೆಲರ್ಮನ್, ಮಿರ್ಕೊ ಪ್ರೂಯ್ಸರ್, ಟೆರೆನ್ಸ್ ಪೀಟರ್ಸ್ ಮತ್ತು ಜಿಪ್ ಜಾನ್ಸೆನ್ ತಲಾ ಒಂದು ಗೋಲು ದಾಖಲಿಸಿದರು. ಪಾಕಿಸ್ತಾನದ ಏಕೈಕ ಗೋಲನ್ನು ರಿಝ್ವನ್ ಆಲಿ ದಾಖಲಿಸಿದರು. ಮಧ್ಯಂತರದ ವೇಳೆಗೆ ನೆದರ್‌ಲ್ಯಾಂಡ್ ತಂಡ 4-0 ಅಂತರದ ಮುನ್ನಡೆ ಸಾಧಿಸಿತ್ತು. ಮೊದಲ ಪಂದ್ಯದಲ್ಲಿ ನೆದರ್‌ಲ್ಯಾಂಡ್ ತಂಡ ಸಮಬಲದ ಸ್ಪರ್ಧೆ ಒಡ್ಡಿದ್ದರೂ ದ್ವಿತೀಯ ಪಂದ್ಯದಲ್ಲಿ ನಮ್ಮ ಲೆಕ್ಕಾಚಾರ ವಿಫಲವಾಯಿತು. ಆಕ್ರಮಣ ಮತ್ತು ರಕ್ಷಣೆ ಎರಡೂ ವಿಭಾಗಗಳಲ್ಲಿ ಅವರ ಕೈ ಮೇಲಾಯಿತು. ಆರಂಭದಲ್ಲೇ ಆಕ್ರಮಣಕಾರಿಯಾಗಿದ್ದ ಅವರ ವೇಗಕ್ಕೆ ನಾವು ಸರಿಸಾಟಿಯಾಗಲಿಲ್ಲ. ಇದೊಂದು ಕೆಟ್ಟ ದಿನವಾಗಿತ್ತು ಮತ್ತು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲವಾಗಿದ್ದೇವೆ ಎಂದು ಪಾಕ್ ತಂಡದ ಕೋಚ್ ಪ್ರತಿಕ್ರಿಯಿಸಿದ್ದಾರೆ. 1960, 1968 ಮತ್ತು 1984ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಪಾಕ್ ತಂಡ, 1992ರಲ್ಲಿ ಕಂಚಿನ ಪದಕ ಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News