ಮೊದಲ ಆವೃತ್ತಿಯ ಎಟಿಪಿ ಕಪ್‌ನಿಂದ ಹಿಂದೆ ಸರಿದ ಫೆಡರರ್

Update: 2019-10-31 07:05 GMT

ಪ್ಯಾರಿಸ್,ಅ.30: ಜನವರಿಯಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಹೊಸ ತಂಡಗಳ ಸ್ಪರ್ಧೆ ಎಟಿಪಿ ಕಪ್‌ನಿಂದ ವೈಯಕ್ತಿಕ ಕಾರಣದಿಂದಾಗಿ ರೋಜರ್ ಫೆಡರರ್ ಹಿಂದೆ ಸರಿದಿದ್ದಾರೆ.

ಮೊದಲ ಆವೃತ್ತಿಯ ಎಟಿಪಿ ಕಪ್ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಕ್ಕೆ ನನಗೆ ತುಂಬಾ ಬೇಸರವಾಗುತ್ತಿದೆ. ಎರಡೂ ಕುಟುಂಬದೊಂದಿಗೆ ಹಾಗೂ ತಂಡದೊಂದಿಗೆ ಭಾರೀ ಚರ್ಚೆ ನಡೆಸಿದ ಬಳಿಕ ಎರಡುವಾರಗಳ ಹೆಚ್ಚುವರಿ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದೇನೆ.ಇದರಿಂದ ನನಗೆ ವೈಯಕ್ತಿಕವಾಗಿ ಲಾಭವಾಗಲಿದೆ ಎಂದು ಫೆಡರರ್ ಹೇಳಿದ್ದಾರೆ.

ಪ್ಯಾರಿಸ್‌ನಲ್ಲಿ ಮಾಸ್ಟರ್ಸ್ 1000 ಟೂರ್ನಿ ಆರಂಭವಾಗಲು ಎರಡು ಗಂಟೆಗಳಿರುವಾಗ ವಿಶ್ವದ ನಂ.3ನೇ ಆಟಗಾರ ಫೆಡರರ್ ಟೂರ್ನಿಯಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದರು.

ಡೇವಿಸ್ ಕಪ್‌ನೊಂದಿಗೆ ಸ್ಪರ್ಧಿಸುತ್ತಿರುವ ಎಟಿಪಿ ಕಪ್ ಹೊಸ ಸ್ಪರ್ಧೆಯಾಗಿದ್ದು, ಜ.3ರಿಂದ 12ರ ತನಕ ಬ್ರಿಸ್ಬೇನ್, ಪರ್ತ್ ಹಾಗೂ ಸಿಡ್ನಿಯಲ್ಲಿ ನಡೆಯಲಿದೆ.

ಕ್ಯಾಲೆಂಡರ್ ವರ್ಷದ ಅತ್ಯಂತ ಕುತೂಹಲಕಾರಿಯಾಗಿರುವ ಹೊಸ ಟೂರ್ನಿಯಲ್ಲಿ ಭಾಗವಹಿಸದೇ ಇರುವುದಕ್ಕೆ ನನಗೆ ನೋವಾಗುತ್ತಿದೆ. ಎಟಿಪಿ ಟೂರ್‌ನಲ್ಲಿ ದೀರ್ಘ ಕಾಲ ಆಡಲು ಇದು ಸರಿಯಾದ ನಿರ್ಧಾರ ಎಂದು ಭಾವಿಸಿದ್ದೇನೆ. ಆಸ್ಟ್ರೇಲಿಯ ಅಭಿಮಾನಿಗಳನ್ನು ಆಸ್ಟ್ರೇಲಿಯ ಓಪನ್‌ನಲ್ಲಿ ಎದುರು ನೋಡಲು ಬಯಸಿದ್ದೇನೆ ಎಂದು ಫೆಡರರ್ ಹೇಳಿದ್ದಾರೆ.

ಡೇವಿಸ್ ಕಪ್ ಮ್ಯಾಡ್ರಿಡ್‌ನಲ್ಲಿ ನ.18ರಿಂದ 24ರ ತನಕ ನಡೆಯಲಿದ್ದು, ಈ ಟೂರ್ನಿಗೆ ಸ್ವಿಟ್ಝರ್ಲೆಂಡ್ ಅರ್ಹತೆ ಪಡೆದಿಲ್ಲ. ಫೆಡರರ್ ನ.10ರಿಂದ ಲಂಡನ್‌ನಲ್ಲಿ ನಡೆಯಲಿರುವ ಎಟಿಪಿ ಟೂರ್ ಫೈನಲ್ಸ್‌ನಲ್ಲಿ ಆಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News