13 ಲಕ್ಷ ಭಾರತೀಯರ ಡೆಬಿಟ್/ಕ್ರೆಡಿಟ್ ಕಾರ್ಡ್ ಮಾಹಿತಿ ಸೋರಿಕೆ: ತನಿಖೆ ನಡೆಸಲು ಬ್ಯಾಂಕ್ ಗಳಿಗೆ ಆರ್ ಬಿಐ ಸೂಚನೆ

Update: 2019-11-01 08:48 GMT

ಹೊಸದಿಲ್ಲಿ, ನ.1: ಭಾರತದ 13 ಲಕ್ಷ ಬ್ಯಾಂಕ್ ಖಾತೆದಾರರ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ದತ್ತಾಂಶ ಸೋರಿಕೆಯಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಗ್ರಾಹಕರ ಕಾರ್ಡ್ ಮಾಹಿತಿಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವಂತೆ ಹಾಗೂ ಸೋರಿಕೆಯಾಗಿದೆ ಎಂಬ ವರದಿಗಳ ಕುರಿತಂತೆ ತನಿಖೆ ನಡೆಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕುಗಳಿಗೆ ಸೂಚಿಸಿದೆ.

ಬ್ಯಾಂಕುಗಳು ಕೈಗೊಂಡ ಕ್ರಮದ ಕುರಿತಂತೆ ಸರಕಾರದ ಸಿಇಆರ್‍ಟಿ-ಇನ್ ಇಲಾಖೆಗೆ ಮಾಹಿತಿ ನೀಡುವಂತೆಯೂ ತಿಳಿಸಲಾಗಿದೆ.

ಕಾರ್ಡುಗಳ ಮಾಹಿತಿಗಳನ್ನು ಅಂತರ್ಜಾಲದಲ್ಲಿ ತಲಾ ಕಾರ್ಡ್‍ಗೆ 100 ಡಾಲರಿನಂತೆ ಮಾರಾಟ ಮಾಡಲಾಗುತ್ತಿದೆ ಎಂದು ಸಿಂಗಾಪುರ ಮೂಲದ ಗ್ರೂಪ್-ಐಬಿ  ಸೆಕ್ಯುರಿಟಿ ಸಂಶೋಧಕ ಸಂಸ್ಥೆ ಬಹಿರಂಗಪಡಿಸಿದೆ ಎಂದು ಝೆಡ್‍ಡಿ ನೆಟ್ ಇತ್ತೀಚೆಗೆ ವರದಿ ಮಾಡಿತ್ತು. ಈ ರೀತಿ ಸೋರಿಕೆಯಾದ ದತ್ತಾಂಶದ ಬೆಲೆಯನ್ನು 130 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.

"ಬ್ಯಾಂಕುಗಳ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲವಾದರೂ ಭಾರತದ ಅತಿ ದೊಡ್ಡ ಬ್ಯಾಂಕುಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮಾಹಿತಿಗಳಿದ್ದವು ಹಾಗೂ ಈ ಕುರಿತಂತೆ ಸಂಬಂಧಿತ ಪ್ರಾಧಿಕಾರಗಳಿಗೆ ಮಾಹಿತಿ ನೀಡಲಾಗಿದೆ" ಎಂದು  ಸಂಸ್ಥೆ ಹೇಳಿತ್ತು.

ಈ ವರ್ಷದ ಆಗಸ್ಟ್ ತಿಂಗಳಿನ ತನಕದ ಅಂಕಿಅಂಶಗಳಂತೆ ಭಾರತದಲ್ಲಿ 5.17 ಕೋಟಿ ಕ್ರೆಡಿಟ್ ಕಾರ್ಡುಗಳು ಹಾಗೂ 85.15 ಕೋಟಿ ಡೆಬಿಟ್ ಕಾರ್ಡುಗಳಿವೆ ಎಂದು ಆರ್‍ ಬಿಐ ಅಂಕಿಅಂಶಗಳು ತಿಳಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News