ಕನ್ನಡ ಭಾಷೆ ವಿಚಾರದಲ್ಲಿ ರಾಜಿ ಇಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-11-01 14:28 GMT

ಬೆಂಗಳೂರು, ನ.1: ‘ಆಡಳಿತ ಹಾಗೂ ವ್ಯವಹಾರದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ. ಭಾಷೆ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಇಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಘೋಷಿಸಿದ್ದಾರೆ.

ಶುಕ್ರವಾರ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 64ನೆ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ರಾಷ್ಟ್ರಧ್ವಜದೊಂದಿಗೆ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಜ್ಯೋತ್ಸವ ಕೇವಲ ಆಚರಣೆಗೆ ಸೀಮಿತವಾಗದೇ ಜೀವನ ಶೈಲಿಯಾಗಬೇಕು ಎಂದು ಅಪೇಕ್ಷೆಪಟ್ಟರು.

ಕನ್ನಡ ಭಾಷೆ ಹೆತ್ತ ತಾಯಿಯಷ್ಟೇ ಮುಖ್ಯ. ಜನರು ಆಂಗ್ಲ ವ್ಯಾಮೋಹದಿಂದ ಹೊರಬರಬೇಕು. ವಾಣಿಜ್ಯ ಮತ್ತು ವ್ಯವಹಾರದಲ್ಲಿ ಕನ್ನಡ ಹೆಚ್ಚಾಗಿ ಬಳಸಬೇಕು ಎಂದ ಯಡಿಯೂರಪ್ಪ, ರಾಜ್ಯದಲ್ಲಿ ಕನ್ನಡಕ್ಕೆ ಅಗ್ರಸ್ಥಾನ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದರು.

ಭಾಷೆಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಮನೆಯಲ್ಲಿ ಕಡ್ಡಾಯವಾಗಿ ಕನ್ನಡ ಮಾತನಾಡಬೇಕು. ಹೆಚ್ಚು-ಹೆಚ್ಚು ಕನ್ನಡ ಪುಸ್ತಕ, ಪತ್ರಿಕೆಗಳನ್ನು ಓದುವಂತಾಗಬೇಕು. ಆಗ ಮಾತ್ರ ಭಾಷೆಯನ್ನು ಉಳಿಸಿಲು ಸಾಧ್ಯ ಎಂದ ಅವರು, ರಾಜ್ಯದಲ್ಲಿ ನೆಲೆಸಿರುವ ಹೊರಗಿನವರು ಇಲ್ಲಿನ ಭಾಷೆ, ಸಂಸ್ಕೃತಿ, ಜೀವನ ವಿಧಾನಗಳಿಗೆ ಹೊಂದಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಇಲ್ಲಿ ನೆಲೆ ನಿಂತಿರುವ ಪರಭಾಷಿಕರು ಕನ್ನಡ ಕಲಿಯಬೇಕು. ಕಲಿಯಲು ಸಮ್ಮತಿಸುವವರಿಗೆ ಕನ್ನಡಿಗರು ಭಾಷೆ ಕಲಿಕೆಗೆ ಪ್ರೋತ್ಸಾಹಿಸಬೇಕು ಎಂದ ಅವರು, ಕನ್ನಡ ಸುಂದರ, ಸಮೃದ್ಧ ಭಾಷೆಯಾಗಿದೆ. ಪ್ರಾಚೀನತೆ ಹಾಗೂ ಆಧುನಿಕತೆಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಶಕ್ತವಾಗಿದೆ ಎಂದರು.

ಎಲ್ಲ ಭಾಷಿಕರು ಮತ್ತು ಎಲ್ಲ ಧರ್ಮದ ಅನುಯಾಯಿಗಳು ಸೌಹಾರ್ದದಿಂದ ಬದುಕುತ್ತಿದ್ದು, ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಕನ್ನಡಿಗರು ಇತರರಿಗೆ ಮಾದರಿ. ಕನ್ನಡಿಗರು ನಿಂತ ನೆಲ ಮತ್ತು ಅಲ್ಲಿನ ಜನರ ಜತೆ ಹೊಂದಿಕೊಂಡು ಬಾಳುತ್ತಿದ್ದಾರೆ ಎಂದು ಅವರು ತಿಳಿಸಿದರು.

ಶಿಕ್ಷಣದಲ್ಲಿ ರಾಜ್ಯ ಸದಾ ನಾವೀನ್ಯತೆಯನ್ನು ಕಂಡುಕೊಂಡು ತನ್ನ ವಿಶಿಷ್ಟ ಛಾಪನ್ನು ಮೂಡಿಸಿದೆ. ಕಲಿಕೆ ಗುಣಮಟ್ಟ ಉತ್ತಮಗೊಳಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಹಿತ್ಯ ವಿಷಯಗಳನ್ನು ಕನ್ನಡ ಭಾಷೆಯಲ್ಲಿಯೇ ಅಭಿವ್ಯಕ್ತಿ ಮಾಡುವಂತಹ ಸತ್ವ ಕನ್ನಡಕ್ಕೆ ಇದೆ ಎಂದು ಯಡಿಯೂರಪ್ಪ ಬಣ್ಣಿಸಿದರು.

ರಾಷ್ಟ್ರಧ್ವಜ ಸ್ಪಷ್ಟೀಕರಣ: ರಾಜ್ಯೋತ್ಸವ ವೇಳೆ ನಾಡಧ್ವಜದ ಬದಲಿಗೆ ರಾಷ್ಟ್ರಧ್ವಜ ಹಾರಿಸಬೇಕೆಂದು ಸರಕಾರ ಆದೇಶ ಹೊರಡಿಸಿದೆ ಎಂಬ ಗೊಂದಲ ಸೃಷ್ಟಿಯಾಗಿದೆ. ಆದರೆ, ಇಂದು ರಾಷ್ಟ್ರಧ್ವಜ ಮತ್ತು ನಾಡಧ್ವಜ ಎರಡನ್ನೂ ಹಾರಿಸಲಾಗಿದೆ. ರಾಷ್ಟ್ರಗೀತೆ ಮತ್ತು ನಾಡಗೀತೆಯನ್ನು ಹಾಡಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಸ್ಪಷ್ಟಪಡಿಸಿದರು.

ಹಲವು ವರ್ಷಗಳಿಂದ ಈ ಪದ್ಧತಿ ಜಾರಿಯಲ್ಲಿದೆ. ರಾಜ್ಯ ಸರಕಾರವೂ ಅದನ್ನೇ ಪಾಲಿಸಿದೆ. ಮುಂದೆಯೂ ಪಾಲಿಸುತ್ತೇವೆ. ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ರೀತಿಯ ಹುರುಳಿಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.

ವಿಧಾನ ಪರಿಷತ್ತು ಸದಸ್ಯರಾದ ಪುಟ್ಟಣ್ಣ, ಅ.ದೇವೇಗೌಡ, ಗೋವಿಂದರಾಜು, ಬಿಬಿಎಂಪಿ ಮೇಯರ್ ಎಂ.ಗೌತಮ್ ಕುಮಾರ್, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ. ಜಗದೀಶ್ ಸಮಾರಂಭದಲ್ಲಿ ಹಾಜರಿದ್ದರು.

‘ಕನ್ನಡ ನಾಡು, ನುಡಿ, ಜಲ ವಿಷಯಗಳಲ್ಲಿ ಎಲ್ಲರಿಗೂ ಅಭಿಮಾನವಿರಬೇಕು. ರಾಜ್ಯೋತ್ಸವ ಕೇವಲ ಆಚರಣೆಗೆ ಸೀಮಿತವಾಗದೆ ಜೀವನ ಶೈಲಿಯಾಗಬೇಕು. ಕರ್ನಾಟಕವನ್ನು ದೇಶದಲ್ಲಿಯೇ ಮಾದರಿ ರಾಜ್ಯವನ್ನಾಗಿಸಲು ಅಭಿವೃದ್ಧಿಗೆ ನಾಡಿನ ತಜ್ಞರ ಸಹಕಾರ ಅಗತ್ಯ’

-ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News