ಯಡಿಯೂರಪ್ಪಗೆ ಊಟದ ಚಿಂತೆ, ಬಿಬಿಎಂಪಿ ಮೇಯರ್ ಕನ್ನಡಿಗನೇ ಅಲ್ಲ: ವಾಟಾಳ್ ನಾಗರಾಜ್

Update: 2019-11-01 15:35 GMT

ಬೆಂಗಳೂರು, ನ.1: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಊಟ ಚಿಂತೆ, ಹಾಗಾಗಿ ನಮ್ಮ ಕಾರ್ಯಕ್ರಮಕ್ಕೆ ಬರಲಿಲ್ಲ. ಬಿಬಿಎಂಪಿ ಮೇಯರ್ ಕನ್ನಡಿಗನಲ್ಲ, ಅದಕ್ಕಾಗಿ ನಾವೇ ಅವರನ್ನು ಆಹ್ವಾನಿಸಲಿಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶದ ಮಾತುಗಳನ್ನಾಡಿದರು.

ಶುಕ್ರವಾರ ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದ ನೃಪತುಂಗ ಮಂಟಪದಲ್ಲಿ ಕರ್ನಾಟಕ ರಾಜ್ಯೋತ್ಸವ ಸಮಿತಿ ಆಯೋಜಿಸಿದ್ದ, ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಹಾಗೂ ಕನ್ನಡ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸದ ಬಳಿಕ, ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕನ್ನಡಿಗರ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದ್ದರು. ಆದರೆ, ಮಧ್ಯಾಹ್ನ 2 ಗಂಟೆ ಸರಿಯಾಗಿ ಊಟ ಮಾಡಬೇಕೆಂದು ಗೈರಾಗಿದ್ದಾರೆ. ಅವರು ಸೂಕ್ತ ಸಮಯಕ್ಕೆ ಊಟ ಮಾಡಲೇಬೇಕಂತೆ. ಹಾಗಾಗಿ, ನಾನೇ ಮುಖ್ಯಮಂತ್ರಿಯಾಗಿ ಈ ಸಮಾರಂಭಕ್ಕೆ ಚಾಲನೆ ನೀಡುತ್ತೇನೆ ಎಂದು ಹೇಳಿದರು.

ಅನೇಕರು ಬಿಬಿಎಂಪಿ ಮೇಯರ್ ಅವರನ್ನು ಏಕೆ ಆಹ್ವಾನಿಸಲಿಲ್ಲ ಎಂದು ಪ್ರಶ್ನಿಸಿದರು. ಅವರು ಕನ್ನಡಿಗರಲ್ಲ, ಮಾರ್ವಾಡಿಗಳ ಜೊತೆ ನಾವು ಕೈ ಜೋಡಿಸುವುದಿಲ್ಲ ಎಂದು ಉತ್ತರಿಸಿದ್ದೇನೆ. ಅಲ್ಲದೆ, ಈಗಾಗಲೇ, ಅವರಿಗೆ ಬೆಂಗಳೂರು ಬಿಟ್ಟುಕೊಟ್ಟಿದ್ದೇವೆ. ಭವಿಷ್ಯದಲ್ಲಿ ನಾವು ಎಚ್ಚರವಹಿಸದೆ, ಹೋದಲ್ಲಿ, ವಿಧಾನಸೌಧವನ್ನೂ ಆಕ್ರಮಿಸಿಕೊಂಡು, ಮುಖ್ಯಮಂತ್ರಿ ಸ್ಥಾನವನ್ನೆ ಅಲಂಕರಿಸುತ್ತಾರೆ ಎಂದು ವಾಟಾಳ್ ವಾಗ್ದಾಳಿ ನಡೆಸಿದರು.

ನಾಡಧ್ವಜ ನಿರಂತರವಾಗಿ ಹಾರಾಡುತ್ತಿರಬೇಕು. ನಾಡಗೀತೆ ನಿರಂತರವಾಗಿ ಮೊಳಗುತ್ತಿರಬೇಕು. ಇದನ್ನು ನಿಲ್ಲಿಸುವ ಕೆಲಸವನ್ನು ಯಾವುದೇ ಸರಕಾರ ಮಾಡಬಾರದು. ಇಂತಹ ಸಾಹಸಕ್ಕೆ ಕೈ ಹಾಕಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಕಳೆದ ಐದಾರು ದಶಕಗಳಿಂದಲೂ ಕನ್ನಡ ಧ್ವಜವನ್ನು ಕನ್ನಡ ರಾಜ್ಯೋತ್ಸವದಂದು ಹಾರಿಸಲಾಗುತ್ತಿದೆ. ಆದರೆ, ಸರಕಾರ ಹೊಸ ಕಾನೂನು ಮಾಡಲು ಮುಂದಾಗಿರುವುದು ದುರದೃಷ್ಟಕರ. ಇದರ ವಿರುದ್ಧ ಸದ್ಯದಲ್ಲೇ ಕನ್ನಡ ಒಕ್ಕೂಟ ಸಭೆ ನಡೆಸಿ ನಾಡಧ್ವಜ ಉಳಿಸಿ ಹೋರಾಟ ಮಾಡುತ್ತೇವೆ ಎಂದರು.

ಕನ್ನಡ ನಾಡಿಗೆ, ಕನ್ನಡ ಧ್ವಜಕ್ಕೆ, ನಾಡಗೀತೆಗೆ ತನ್ನದೇ ಆದ ಇತಿಹಾಸವಿದೆ. ಇದಕ್ಕೆ ಧಕ್ಕೆ ಆಗಲು ನಾವು ಬಿಡುವುದಿಲ್ಲ. ನಾನು ಆರು ದಶಕಗಳಿಂದಲೂ ನಾಡು, ನುಡಿ, ಗಡಿಗಾಗಿ ಹೋರಾಟ ಮಾಡುತ್ತ ಬಂದಿದ್ದೇನೆ. ಉಸಿರಿರುವವರೆಗೂ ಇದಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ವಾಟಾಳ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News