ರೋಹಿತ್‌ಗೆ ಗಾಯದ ಭೀತಿ

Update: 2019-11-01 18:32 GMT

ಹೊಸದಿಲ್ಲಿ, ನ.1: ಭಾರತದ ಹಂಗಾಮಿ ನಾಯಕ ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಕ್ಕಿಂತ ಮೊದಲು ಗಾಯದ ಭೀತಿ ಎದುರಿಸುತ್ತಿದ್ದಾರೆ.

ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶುಕ್ರವಾರ ರೋಹಿತ್ ಅಭ್ಯಾಸ ನಿರತರಾಗಿದ್ದಾಗ ಚೆಂಡು ತೊಡೆಗೆ ಬಲವಾಗಿ ಅಪ್ಪಳಿಸಿ ಗಾಯವಾಗಿದೆ. ನೆಟ್‌ನಲ್ಲಿ ರೋಹಿತ್‌ಗೆ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ಹಾಗೂ ಶ್ರೀಲಂಕಾದ ನುವಾನ್ ಸೆನೆವಿರತ್ನೆ ಚೆಂಡನ್ನು ಎಸೆಯುವ ಕೆಲಸ ಮಾಡುತ್ತಿದ್ದರು. ತೊಡೆಗೆ ಚೆಂಡಿನ ಏಟು ಬಿದ್ದ ಬಳಿಕ 32ರ ಹರೆಯದ ರೋಹಿತ್ ನೆಟ್ ಪ್ರಾಕ್ಟೀಸ್‌ನ್ನುಮೊಟಕುಗೊಳಿಸಿದ್ದರು. ರೋಹಿತ್ ಗಾಯದ ಬಗ್ಗೆ ಸಹಾಯಕ ಸಿಬ್ಬಂದಿ ತಾಜಾ ಮಾಹಿತಿ ನೀಡಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಶ್ರೇಷ್ಠ ಫಾರ್ಮ್‌ನಲ್ಲಿದ್ದ ರೋಹಿತ್ ಅವರು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕತ್ವದ ಜೊತೆಗೆ ಬ್ಯಾಟಿಂಗ್‌ನ ಹೊಣೆ ಹೊತ್ತಿದ್ದಾರೆ.

ಇಂಗ್ಲೆಂಡ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಐದು ಶತಕಗಳನ್ನು ಸಿಡಿಸಿ ಮಿಂಚಿದ್ದ ರೋಹಿತ್ ದಕ್ಷಿಣ ಆಫ್ರಿಕಾ ವಿರುದ್ಧ ಇತ್ತೀಚೆಗೆ ಸ್ವದೇಶದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ವೃತ್ತಿಜೀವನದಲ್ಲಿ ಮೊದಲ ಬಾರಿ ಆರಂಭಿಕ ಆಟಗಾರನಾಗಿ ಕಾಣಿಸಿಕೊಂಡು ಭಾರೀ ಯಶಸ್ಸು ಕಂಡಿದ್ದರು. ಸರಣಿಯಲ್ಲಿ ಆಫ್ರಿಕಾದ ವಿರುದ್ಧ ಒಂದು ದ್ವಿಶತಕ ಸಹಿತ ಮೂರು ಶತಕಗಳನ್ನು ಗಳಿಸಿದ್ದರು. ಸರಣಿಯನ್ನು ಭಾರತ 3-0 ಅಂತರದಿಂದ ಗೆದ್ದುಕೊಂಡಿತ್ತು.

ಹೊಸದಿಲ್ಲಿಯಲ್ಲಿನ ಪ್ರತಿಕೂಲ ಹವಾಗುಣದ ಬಗ್ಗೆ ನಾವು ಚಿಂತಿತರಾಗಿಲ್ಲ ಎಂದು ರಾಥೋರ್ ಹಾಗೂ ಬಾಂಗ್ಲಾದೇಶದ ಕೋಚ್ ರಸೆಲ್ ಡೊಮಿಂಗೊ ಸ್ಟಷ್ಟಪಡಿಸಿದ್ದರು. ದಿಲ್ಲಿಯ ವಾತಾವರಣ ಚೆನ್ನಾಗಿಲ್ಲ. ಯಾರೂ ಕೂಡ ಇದರಿಂದ ಕಾಯಿಲೆ ಪೀಡಿತರಾಗಿಲ್ಲ ಅಥವಾ ಸಾವನ್ನಪ್ಪಿಲ್ಲದ ಕಾರಣ ದೂರನ್ನು ನೀಡಿಲ್ಲ ಎಂದು ಡೊಮಿಂಗೊ ಹೇಳಿದ್ದಾರೆ.

ಇಂತಹ ವಾತಾವರಣದಲ್ಲಿ ಆಡಲು ಟೀಮ್ ಇಂಡಿಯಾ ಆಟಗಾರರನ್ನು ಬಳಸಿಕೊಳ್ಳಲಾಗುತ್ತಿದ್ದು, ಇದರಿಂದ ಅವರಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ರಾಥೋರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News