​ಕುತ್ತಿಗೆಗೆ ಹೆಬ್ಬಾವು ಸುತ್ತಿ ಮಹಿಳೆ ಸಾವು !

Update: 2019-11-02 05:19 GMT

ವಾಷಿಂಗ್ಟನ್ : ಹಾವು ಸಾಕುವ ಮನೆಯೊಂದರಲ್ಲಿ 36 ವರ್ಷದ ಮಹಿಳೆಯ ಕುತ್ತಿಗೆಗೆ ಹೆಬ್ಬಾವು ಸುತ್ತು ಹಾಕಿದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಇಂಡಿಯಾನಾದಲ್ಲಿ ಬೆಳಕಿಗೆ ಬಂದಿದೆ.

ಆಕ್ಸ್‌ಫರ್ಡ್‌ನ ಮನೆಯೊಂದರಲ್ಲಿ ಲಾರಾ ಹೃಷ್ಟ್ ಎಂಬ ಮಹಿಳೆಯ ಮೃತದೇಹ ಪತ್ತೆ ಮಾಡಲಾಗಿದೆ ಎಂದು ರಾಜ್ಯ ಪೊಲೀಸ್ ವಕ್ತಾರ ಸಾರ್ಜೆಂಟ್ ಕಿಮ್ ರಿಲೇ ಹೇಳಿದ್ದಾರೆ. ಮಹಿಳೆಯ ಕುತ್ತಿಗೆಯ ಸುತ್ತ ಎಂಟು ಅಡಿ ಉದ್ದದ ಹೆಬ್ಬಾವು ಸುತ್ತಿಕೊಂಡಿತ್ತು.

"ಹಾವು ಸುತ್ತಿಕೊಂಡ ಪರಿಣಾಮ ಉಸಿರುಗಟ್ಟಿ ಮಹಿಳೆ ಮೃತಪಟ್ಟಿರಬೇಕು. ಆದರೆ ಅಟಾಪ್ಸಿ ವರದಿ ಬರುವವರೆಗೂ ಸ್ಪಷ್ಟ ಚಿತ್ರಣ ಸಿಗಲಾರದು" ಎಂದು ರಿಲೇ ಅವರ ಹೇಳಿಕೆಯನ್ನು ಉಲ್ಲೇಖಿಸಿ ಲಫೇಟ್ ಜರ್ನಲ್ ಆ್ಯಂಡ್ ಕೊರಿಯರ್ ಪತ್ರಿಕೆ ವರದಿ ಮಾಡಿದೆ. ಬೆಂಟನ್ ಕೌಂಟಿ ಶೆರೀಫ್ ಡಾನ್ ಮುನ್ಸನ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಇಲ್ಲಿ ಹಾವುಗಳ ಉದ್ಯಾನವನ ನಿರ್ಮಿಸಲಾಗಿತ್ತು. ಹೃಷ್ಟ್ ತಮ್ಮ 20 ಹಾವುಗಳನ್ನು ಇಲ್ಲಿ ಪಾಲನೆಗೆ ಬಿಟ್ಟಿದ್ದರು.

"ಇದು ತೀರಾ ದುರಂತ ಘಟನೆ. ಹೆಬ್ಬಾವು ವಿಷರಹಿತ ಹಾವುಗಳ ಕುಟುಂಬಕ್ಕೆ ಸೇರಿದ್ದು, ಆಫ್ರಿಕಾ, ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತದೆ. ಸುಮಾರು 30 ಬಗೆಯ ಹೆಬ್ಬಾವುಗಳಿದ್ದು, ವಿಶ್ವದ ಅತಿದೊಡ್ಡ ಹಾವುಗಳ ಪೈಕಿ ಹೆಬ್ಬಾವು ಸೇರಿದೆ" ಎಂದು ಮುನ್ಸನ್ ಹೇಳಿದ್ದಾರೆ.

ಹಿಮ್ಮುಖವಾಗಿ ಬಾಗಿದ ಹರಿತವಾದ ಹಲ್ಲುಗಳ ನೆರವಿನಿಂದ ಇವು ತಮ್ಮ ಬೇಟೆಯನ್ನು ಹಿಡಿಯುತ್ತವೆ. ಬಳಿಕ ಬಿಗಿಯಾಗಿ ಸುತ್ತಿಕೊಳ್ಳುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News