ಲೋಕಾಯುಕ್ತದಲ್ಲಿ ಶೇ.90 ವರದಿಗಳು ಮೂಲೆಗುಂಪು: ನ್ಯಾ.ಎನ್.ಸಂತೋಷ್ ಹೆಗ್ಡೆ

Update: 2019-11-02 16:07 GMT

ಬೆಂಗಳೂರು, ನ.2: ಲೋಕಾಯುಕ್ತದಲ್ಲಿ ತನಿಖೆಯಾಗುವ ಶೇ.90 ರಷ್ಟು ವರದಿಗಳು ಮೂಲೆಗುಂಪಾಗುತ್ತಿವೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಶನಿವಾರ ನಗರದ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ಲೋಕಾಯುಕ್ತ ಹಾಗೂ ಕುಂದು ಕೊರತೆಗಳ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಲೋಕಾಯುಕ್ತವನ್ನು ಭ್ರಷ್ಟಾಚಾರ ಹಾಗೂ ದುರಾಡಳಿತವನ್ನು ಕೊನೆಗಾಣಿಸುವ ಉದ್ದೇಶದಿಂದ ಸ್ಥಾಪನೆ ಮಾಡಲಾಗಿದೆ. ಆದರೆ, ಇಂದು ಅದರ ಅಧಿಕಾರವನ್ನು ಸಂಪೂರ್ಣವಾಗಿ ಕಸಿದುಕೊಳ್ಳಲಾಗಿದೆ. ಲೋಕಾಯುಕ್ತದಲ್ಲಿ ತನಿಖೆ ಹಂತಕ್ಕೆ ಬರುವ ಹಲವು ಪ್ರಕರಣಗಳಲ್ಲಿ ಶಿಕ್ಷೆಯಾಗುವುದು ಕಡಿಮೆಯಾಗಿದೆ. ಅನೇಕ ವರದಿಗಳು ಬಿಡುಗಡೆಯಾಗದೇ ಮೂಲೆ ಸೇರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ಲೋಕಾಯುಕ್ತವು ಬಂಗಾರದ ಮಂಚದ ಮೇಲೆ ಮಲಗುವಂತಹ ಭ್ರಷ್ಟರಿಂದ ಆರಂಭವಾಗಿ, ಬಿಬಿಎಂಪಿ ಹಗರಣ, ಡಿನೋಟಿಫೈ ಹಗರಣಗಳು ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಭ್ರಷ್ಟರಿಗೆ ಶಿಕ್ಷೆಯಾಗುವಲ್ಲಿ ಯಶಸ್ವಿಯಾಗಿದೆ. ಆದರೆ, ಇಂದಿನ ಲೋಕಾಯುಕ್ತ ಕೇವಲ ಹೆಸರಿಗಷ್ಟೇ ಸೀಮಿತವಾದಂತಿದೆ ಎಂದು ಹೇಳಿದರು.

ಲೋಕಾಯುಕ್ತದಲ್ಲಿ ಅಧಿಕಾರಿ ಕ್ರಮ ಕೈಗೊಳ್ಳಲು ಮುಕ್ತನಾಗಿರುತ್ತಾನೆ. ಆದರೆ, ಯಾವ ರಾಜಕೀಯ ಪಕ್ಷಕ್ಕೂ ಸ್ವಯಂ ವಿಚಾರಣೆ ನಡೆಸುವ ಸಂಸ್ಥೆ ಬೇಡವಾಗಿದೆ. ಒಂದು ಪಕ್ಷ ಅಧಿಕಾರದಲ್ಲಿದ್ದಾಗ ಮತ್ತೊಂದು ಪಕ್ಷ ಲೋಕಾಯುಕ್ತ ವರದಿ ಜಾರಿ ಮಾಡಬೇಕು, ಅದನ್ನು ಮತ್ತಷ್ಟು ಬಲಪಡಿಸಬೇಕು ಎಂದು ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿತ್ತು ಎಂದು ಹೇಳಿದರು.

ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿದ ಪಕ್ಷವೇ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದಾಗ ಅದನ್ನು ಜಾರಿಗೆ ತರಲಿಲ್ಲ. ಬದಲಿಗೆ, ಲೋಕಾಯುಕ್ತ ದುರ್ಬಲಗೊಳಿಸಿ, ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ಜಾರಿ ಮಾಡಿದ್ದಾರೆ. ಇದು ಯಾರದೇ ವಿರುದ್ಧ ಕ್ರಮ ಕೈಗೊಳ್ಳಬೇಕಾದರೂ ಸರಕಾರದ ಅನುಮತಿ ಪಡೆಯಬೇಕಿದೆ. ಇಂತಹುದರಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

1983ರಲ್ಲಿ ಜನತಾ ಸರಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಲೋಕಾಯುಕ್ತವನ್ನು ಜಾರಿ ಮಾಡುತ್ತೇವೆಂದು ಹೇಳಿತ್ತು. ಚುನಾವಣೆಯ ಬಳಿಕ ಜನರ ಒತ್ತಾಯದ ಮೇರೆಗೆ ಲೋಕಾಯುಕ್ತವನ್ನು ಸ್ಥಾಪಿಸಿತು. ಆದರೆ, ಅದು ಸ್ಥಾಪನೆ ಬಳಿಕ ಇದ್ದೂ, ಇಲ್ಲದಂತಿತ್ತು. ನ್ಯಾ.ವೆಂಕಟಾಚಲಯ್ಯ ಲೋಕಾಯುಕ್ತರಾದ ಬಳಿಕ ಅದಕ್ಕೆ ಬಲ ಬಂದಿತು. ಬಳಿಕ ಸರಕಾರವೂ ಲೋಕಾಯುಕ್ತ ಬಲಿಷ್ಠ ಪಡಿಸಲು ಹಲವು ಕ್ರಮಗಳನ್ನು ಕೈಗೊಂಡಿತು ಎಂದು ಸಂತೋಷ್ ಹೆಗ್ಡೆ ಹೇಳಿದರು.

ಲೋಕಾಯುಕ್ತದ ಅಧಿಕಾರಿಗಳು ಪ್ರಕರಣಗಳನ್ನು ತನಿಖೆ ಮಾಡುವುದರ ಜತೆಗೆ ಜನರ ಕುಂದು-ಕೊರತೆಗಳನ್ನು ಆಲಿಸುವುದು ಬಹಳ ಮುಖ್ಯವಾಗಿದೆ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಅಧಿಕಾರಶಾಹಿ, ಅಶಿಸ್ತುಗಳಿಗೆ ಸಂಬಂಧಿಸಿದ ದೂರುಗಳ ಬಗ್ಗೆ ಕ್ರಮ ತೆಗೆದುಕೊಂಡು, ಸಾರ್ವಜನಿಕ ಆಡಳಿತದ ಸ್ತರಗಳನ್ನು ಉತ್ತಮಪಡಿಸುವ ಕಡೆಗೆ ಸಾಗಬೇಕಿದೆ ಎಂದು ಅವರು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸರಕಾರದ ಅಡ್ವೋಕೇಟ್ ಜನರಲ್ ಉದಯ ಹೊಳ್ಳ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News