ಬೆಂಗಳೂರು: ಆರ್‌ಸಿಇಪಿ ಒಪ್ಪಂದ ವಿರೋಧಿಸಿ ಕೇಂದ್ರದ ವಿರುದ್ಧ ರೈತರ ಪ್ರತಿಭಟನೆ

Update: 2019-11-04 13:44 GMT

ಬೆಂಗಳೂರು, ನ.4: ಕೇಂದ್ರದ ಬಿಜೆಪಿ ಸರಕಾರ ಸುಂಕ ರಹಿತ ಹಾಲು ಹಾಗೂ ಹಾಲಿನ ಉತ್ಪನ್ನಗಳ ಆಮದಿಗೆ ಒಪ್ಪಿಗೆ ಸೂಚಿಸುವುದರ ಮೂಲಕ, ದೇಶದ ಹಾಲು ಉತ್ಪಾದಕರು ಬೀದಿ ಪಾಲಾಗುವಂತೆ ಮಾಡಿದೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದರು.

ಸೋಮವಾರ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿ ನೇತೃತ್ವದಲ್ಲಿ ಜಮಾಯಿಸಿದ ರೈತರು, ಯಾವುದೇ ಕಾರಣಕ್ಕೂ ಆರ್‌ಸಿಇಪಿ ಒಪ್ಪಂದಕ್ಕೆ ಕೇಂದ್ರ ಸರಕಾರ ಸಹಿ ಹಾಕಬಾರದು ಎಂದು ಒತ್ತಾಯಿಸಿದರು.

ದೇಶದಲ್ಲಿ ಕ್ಷೀರೋತ್ಪಾದನೆ ಈಗಾಗಲೇ ನಷ್ಟದ ಉದ್ಯಮವಾಗಿ ಪರಿಣಮಿಸಿದೆ. ಉತ್ಪಾದನಾ ವೆಚ್ಚವೂ ಸಿಗುತ್ತಿಲ್ಲ. ಆದ್ದರಿಂದ ಹಾಲಿನ ಬೆಲೆಯನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿರುವಾಗ, ಶೇ.64 ರಷ್ಟು ಆಮದು ಸುಂಕವನ್ನು ತೆಗೆಯುವುದರ ಮೂಲಕ ಅಗ್ಗದ ವಿದೇಶಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತರಿಸಿಕೊಳ್ಳಲು ಮುಂದಾಗಿರುವುದು ರೈತ ವಿರೋಧಿ ಕ್ರಮ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ, ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಹಾಲಿನ ಉತ್ಪನ್ನಗಳನ್ನು ಸೇರಿಸಿದ್ದೇ ಆದರೆ, ಭಾರತೀಯ ಹೈನೋದ್ಯಮಕ್ಕೆ ಭಾರಿ ಅಪಾಯ ಇದೆ. ಹೀಗಾಗಿ, ಒಪ್ಪಂದದಿಂದ ಇದನ್ನು ಹೊರಗಿಡಬೇಕು. ಅಲ್ಲದೇ, ಮುಕ್ತ ವ್ಯಾಪಾರ ಜಾರಿಯಾದರೆ ನ್ಯೂಝಿಲೆಂಡ್, ಆಸ್ಟ್ರೇಲಿಯಾದಂತಹ ದೇಶಗಳಿಂದ ಅಗ್ಗದ ದರದ ಹಾಲು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಇದರಿಂದ ದೇಶದ ಹೈನೋದ್ಯಮ ಅವಸಾನಕ್ಕೆ ಹೋಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಮನವಿ: ಸುಂಕ ರಹಿತ ಹಾಲು ಮತ್ತು ಹಾಲಿನ ಉತ್ಪನ್ನಗಳ ಆಮದಿಗೆ ಅವಕಾಶ ನೀಡುವ ಆರ್‌ಸಿಇಪಿ ಒಪ್ಪಂದ ವಿರೋಧಿಸಿ ಕೇಂದ್ರ ಸರಕಾರಕ್ಕೆ ವರದಿ ನೀಡಲು ಬೆಂಗಳೂರು ಜಿಲ್ಲಾಧಿಕಾರಿಗಳ ಮೂಲಕ ರೈತರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಬೆಂ.ಜಿಲ್ಲಾಧ್ಯಕ್ಷ ಪಾಲನೇತ್ರಯ್ಯ, ಜಿಲ್ಲಾ ಕಾರ್ಯದರ್ಶಿ ನರಸಿಂಹಮೂರ್ತಿ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News