ಇವರಿಂದಾಗಿ ಟಿಪ್ಪುವಿನ ಇತಿಹಾಸ ತಿಳಿಯುವಂತಾಯಿತು

Update: 2019-11-04 18:32 GMT

ಮಾನ್ಯರೇ,

ಬಿಜೆಪಿಯವರು ಟಿಪ್ಪುಸುಲ್ತಾನರ ಇತಿಹಾಸದ ವಿಷಯದಲ್ಲಿ ವಿವಾದ ಎಬ್ಬಿಸಿದ್ದು ಒಂದು ದೃಷ್ಟಿಯಿಂದ ಒಳ್ಳೆಯದೇ ಆಯಿತು. ಈ ನೆಪದಿಂದಲಾದರೂ ಕರ್ನಾಟಕದ ಪತ್ರಿಕೆ ಮತ್ತು ನಿಯತಕಾಲಿಕೆಗಳು ಟಿಪ್ಪುವಿನ ಇತಿಹಾಸದಲ್ಲಿ ಅಡಗಿದ್ದ ಅಮೂಲ್ಯ ರತ್ನಗಳನ್ನು ಹೆಕ್ಕಿ ತೆಗೆದು ದೇಶದ ಜನರಿಗೆ ಪರಿಚಯಿಸಿದರು. ಇದರಿಂದ ಟಿಪ್ಪುಎಂತಹ ಮಹಾನ್ ವ್ಯಕ್ತಿ ಎಂಬುದು ಜನರಿಗೆ ಮನವರಿಕೆಯಾಯಿತು. ಪೇಶ್ವೆಗಳಿಂದ ಲೂಟಿಯಾಗಿದ್ದ ಶೃಂಗೇರಿ ಸಹಿತ ನೂರಾರು ಹಿಂದೂ ದೇವಳಗಳಿಗೆ ಟಿಪ್ಪುದತ್ತಿದಾನ ಕೊಟ್ಟಿದ್ದನ್ನು ಹಾಗೂ ನಿರಂತರ ಪೂಜೆಗೆ ವ್ಯವಸ್ಥೆ ಮಾಡಿದ್ದನ್ನು ಜನ ತಿಳಿಯುವಂತಾಯಿತು. ಹತ್ತಾರು ಬಾರಿ ಕೊಲ್ಲೂರಿಗೆ ಹೋಗಿ ಮೂಕಾಂಬಿಕೆಯ ದರ್ಶನ ಮಾಡಿದ್ದ ನನ್ನ ಕುಟುಂಬದವರಿಗೂ ಅಲ್ಲಿ ಪ್ರತಿ ದಿನ ಟಿಪ್ಪುವಿನ ಹೆಸರಲ್ಲಿ ‘‘ಸಲಾಂ ಪೂಜೆ’’ ನಡೆಯುತ್ತದೆ ಎಂಬುದೇ ಗೊತ್ತಿರಲಿಲ್ಲ. ದಕ್ಷಿಣ ಕಾಶಿ ನಂಜನಗೂಡಿನ ದೇವಸ್ಥಾನದಲ್ಲೂ ಇಂತಹ ಪೂಜೆ ದಿನಾಲೂ ನಡೆಯುತ್ತದೆಯಂತೆ. ‘ಮುಜರಾಯಿ’ ಎಂಬುದು ಪರ್ಷಿಯನ್ ಶಬ್ಧ. ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಈ ಪರ್ಷಿಯನ್ ಹೆಸರು ಬರಲು ಮೂಲ ಕಾರಣ ತಾನು ಹಿಂದೂ ದೇವಳಗಳಿಗೆ ಕೊಡುತ್ತಿದ್ದ ದತ್ತಿದಾನಗಳು ನಿರಂತರವಾಗಿ ನಡೆಯುತ್ತಿರಬೇಕು ಎಂಬ ಉದ್ದೇಶದಿಂದ ಈ ಮುಜರಾಯಿ ಎಂಬ ಹೆಸರಿನ ಇಲಾಖೆಯನ್ನು ಸ್ವತಃ ಟಿಪ್ಪುವೇ ಸ್ಥಾಪಿಸಿದ್ದು. ಅದೇ ಹೆಸರು ಈಗಲೂ ಕರ್ನಾಟಕ ಸರಕಾರ ಮುಂದುವರಿಸಿದೆ.

ಮೇಲ್ಜಾತಿ ಜಮೀನುದಾರರಿಂದ ಭೂಮಿ ಕಿತ್ತು ದಲಿತರಿಗೆ ಕೊಟ್ಟವರಲ್ಲಿ ಟಿಪ್ಪುವೇ ದೇಶದಲ್ಲಿ ಮೊದಲಿಗ ಹಾಗೂ ಕೊನೆಯವನು. ಅವನ ಸೇನೆಯಲ್ಲಿ ಒಬ್ಬ ದಲಿತನನ್ನು ದಂಡನಾಯಕ ಮಾಡಿದ್ದನು. ಕೆಳಜಾತಿಯ ಯುವತಿಯರು ಸೊಂಟದಿಂದ ಮೇಲೆ ಬಟ್ಟೆ ಉಡುವುದನ್ನು ಕೇರಳದಲ್ಲಿ ಹಿಂದೂ ವರ್ಮಾ ರಾಜರು ನಿಷೇಧಿಸಿದ್ದರು ಹಾಗೂ ಎಲ್ಲ ಕೆಳಜಾತಿ ಹೆಂಗಸರಿಗೆ ಇಡೀ ಜಗತ್ತಿನಲ್ಲಿಯೇ ಅತಿ ಅಮಾನವೀಯ ತೆರಿಗೆ ಎಂದು ಹೇಳಲಾದ ‘ಸ್ತನ ತೆರಿಗೆ’ ವಿಧಿಸುತ್ತಿದ್ದರು, ಅದೂ ಸ್ತನದ ಆಕಾರಕ್ಕೆ ತಕ್ಕಂತೆ ಈ ತೆರಿಗೆ ಹೆಚ್ಚು ಕಡಿಮೆಯಾಗುತ್ತಿತ್ತಂತೆ. ಆದರೆ ಕೇರಳದ ಎಲ್ಲಾ ಕೆಳಜಾತಿ ಹೆಂಗಸರು ಕಡ್ಡಾಯವಾಗಿ ಕುಪ್ಪಸ-ಮೇಲ್ವಸ್ತ್ರ ತೊಟ್ಟು ಮಾನ ಮುಚ್ಚಿಕೊಳ್ಳಬೇಕು ಎಂದು ಆದೇಶಿಸಿ ಕೇರಳದ ಕೋಟ್ಯಂತರ ಕೆಳಜಾತಿ ಮಹಿಳೆಯರ ಮಾನ ಕಾಪಾಡುವ ಶಾಸನ ಮಾಡಿದ ಏಕೈಕ ದೊರೆ ಟಿಪ್ಪು! ಒಟ್ಟಾರೆ ಟಿಪ್ಪುವಿನ ಮಹಾನ್ ಕಾರ್ಯಗಳು ದೇಶದ ಎಲ್ಲಾ ಜನರಿಗೆ ತಿಳಿಯುವಂತಾಗಲು ಕೆಲವರ ಕುತ್ಸಿತ ತಿಳಿಗೇಡಿತನ ಕಾರಣವಾಯಿತು! ಅದಕ್ಕಾಗಿ ಅವರಿಗೆ ಧನ್ಯವಾದಗಳು.

-ಪ್ರವೀಣ್ ಎಸ್. ಶೆಟ್ಟಿ, ಬೋಳೂರು, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News