ಗೆಲುವು ಆಟಗಾರರಲ್ಲಿ ಚೈತನ್ಯ ತುಂಬಿದೆ: ಮುಶ್ಪೀಕುರ್ರಹೀಂ

Update: 2019-11-05 09:59 GMT

ಹೊಸದಿಲ್ಲಿ, ನ.4: ಭಾರತದ ಎದುರು ನಡೆದ ಪ್ರಥಮ ಟ್ವೆಂಟಿ -20 ಕ್ರಿಕೆಟ್ ಪಂದ್ಯದಲ್ಲಿ ರೋಚಕ ಗೆಲುವು ಪಡೆದು ಸರಣಿಯಲ್ಲಿ ಮುನ್ನಡೆ ಸಾಧಿಸಿರುವುದು ಹಗರಣಗಳಿಂದ ತೀವ್ರ ಗೊಂದಲಗೊಂಡಿದ್ದ ಆಟಗಾರರಲ್ಲಿ ಮತ್ತೆ ಚೈತನ್ಯ ತುಂಬಿದೆ ಎಂದು ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದ ಮುಶ್ಪೀಕುರ್ರಹೀಂ ಹೇಳಿದ್ದಾರೆ.

ಹೊಸದಿಲ್ಲಿಯಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 149 ರನ್‌ಗಳ ಗುರಿ ಬೆನ್ನಟ್ಟುವಲ್ಲಿ ಬಾಂಗ್ಲಾದೇಶದ ಅನುಭವಿ ಆಟಗಾರ ಮುಶ್ಪೀಕುರ್ರಹೀಂ ಪ್ರಮುಖ ಪಾತ್ರ ವಹಿಸಿದ್ದು ಅಜೇಯ 60 ರನ್ ಸಿಡಿಸಿದ್ದರು.

ಮ್ಯಾಚ್‌ಫಿಕ್ಸಿಂಗ್ ಆಮಿಷ ಒಡ್ಡಲು ತನ್ನನ್ನು ಕೆಲವು ಬುಕಿಗಳು ಸಂಪರ್ಕಿಸಿದ್ದರು ಎಂಬ ಮಾಹಿತಿಯನ್ನು ಗುಪ್ತವಾಗಿರಿಸಿದ್ದ ಕಾರಣದಿಂದ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ, ಹಿರಿಯ ಆಲ್‌ರೌಂಡರ್ ಶಕೀಬ್‌ಅಲ್ ಹಸನ್‌ರನ್ನು ಐಸಿಸಿ 2 ವರ್ಷ ನಿಷೇಧಿಸಿತ್ತು. ಬಾಂಗ್ಲಾದೇಶದ ಕ್ರಿಕೆಟ್ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳುವ ಎರಡು ದಿನಗಳ ಹಿಂದೆಯಷ್ಟೇ ಐಸಿಸಿ ಈ ನಿರ್ಧಾರ ಪ್ರಕಟಿಸಿದ್ದು ತಂಡಕ್ಕೆ ಆಘಾತ ನೀಡಿತ್ತು. ಬಳಿಕ ಮಹಮುದುಲ್ಲಾ ರಿಯಾದ್‌ಗೆ ನಾಯಕತ್ವ ವಹಿಸಲಾಗಿದೆ. ಅಲ್ಲದೆ ವೇತನದ ವಿಷಯದಲ್ಲಿ ಬಾಂಗ್ಲಾ ಕ್ರಿಕೆಟ್ ಮಂಡಳಿಯ ಜೊತೆ ಮುನಿಸಿಕೊಂಡಿದ್ದ ಆಟಗಾರರು ಪ್ರತಿಭಟನೆ ನಡೆಸಿದ್ದ ಕಾರಣ ಒಂದು ಹಂತದಲ್ಲಿ ಭಾರತದ ಪ್ರವಾಸದ ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿದಿತ್ತು. ಇದರ ಜೊತೆಗೆ, ಭರವಸೆಯ ಆಟಗಾರ ತಮೀಮ್ ಇಕ್ಬಾಲ್ ಕೌಟುಂಬಿಕ ಕಾರಣಗಳಿಂದ ಪ್ರವಾಸದಿಂದ ಹಿಂದೆ ಸರಿದಿದ್ದರು. ತನ್ನ ಕ್ರಿಕೆಟ್ ಜೀವನದ 15 ವರ್ಷಗಳಲ್ಲೇ , ಕಳೆದ ಎರಡು ಅಥವಾ ಮೂರು ವಾರ ಅತ್ಯಂತ ಕಠಿಣವಾಗಿತ್ತು. ನಾವು ಒಂದೆರಡು ಪಂದ್ಯ ಗೆದ್ದರೆ ಅಥವಾ ಅತ್ಯುತ್ತಮವಾಗಿ ಆಡಿದರೆ ಮಾತ್ರ ಗೊಂದಲದಿಂದ ಹೊರಬರಬಹುದು ಎಂದು ಬಾಂಗ್ಲಾದೇಶದಿಂದ ಹೊರಡುವ ಮೊದಲು ಉಳಿದ ಆಟಗಾರರಲ್ಲಿ ಒಂದು ಕಿವಿ ಮಾತು ಹೇಳಿದ್ದೆ. ಆದ್ದರಿಂದ ಈ ಗೆಲುವು ತಂಡದ ಆಟಗಾರರ ಮುಖದಲ್ಲಿ ನಗುವನ್ನು ಅರಳಿಸಿ ಮನಸ್ಸಿಗೆ ಶಾಂತಿ ತರುತ್ತದೆ. ಎರಡು ಮೂರು ಪ್ರಮುಖ ಆಟಗಾರರ ಸೇವೆಯನ್ನು ತಂಡ ಕಳೆದುಕೊಂಡಿದ್ದರೂ ಯುವ ಆಟಗಾರರು ಚೇತೋಹಾರಿ ಪ್ರದರ್ಶನ ತೋರಿದ್ದರಿಂದ ಗೆಲುವು ಸಾಧ್ಯವಾಗಿದೆ. ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸುವ ಅಗತ್ಯವಿದೆ ಎಂದು ಮುಶ್ಪೀಕುರ್ರಹೀಂ ಹೇಳಿದ್ದಾರೆ.

ಭಾರತದೆದುರಿನ ಪ್ರಥಮ ಟ್ವೆಂಟಿ -20 ಪಂದ್ಯದಲ್ಲಿ ಗೆಲುವಿಗೆ 149 ರನ್ ಗಳಿಸಬೇಕಿದ್ದ ಬಾಂಗ್ಲಾದೇಶ, ಆರಂಭಿಕ ಆಟಗಾರ ಲಿಂಟನ್‌ದಾಸ್‌ರನ್ನು ಮೊದಲ ಓವರ್‌ನಲ್ಲೇ ಕಳೆದುಕೊಂಡಿತ್ತು. ಆದರೆ ಅಮೋಘ ಆಟವಾಡಿದ್ದ ಮುಶ್ಪೀಕುರ್ರಹೀಂ 43 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 60 ರನ್ ಸಿಡಿಸಿ ಗೆಲುವಿನ ಸಂಭ್ರಮಾಚರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News