ಸ್ವದೇಶದಲ್ಲಿ ಪ್ರತಿ ವರ್ಷ ಹಗಲು ರಾತ್ರಿ ಟೆಸ್ಟ್: ಸೌರವ್ ಗಂಗುಲಿ

Update: 2019-11-05 02:38 GMT

  ಹೊಸದಿಲ್ಲಿ, ನ.4: ಭಾರತ ಸ್ವದೇಶದಲ್ಲಿ ಕ್ರಿಕೆಟ್ ಸರಣಿ ಆಡುವಾಗ ಪ್ರತೀ ವರ್ಷ ಹಗಲು ರಾತ್ರಿ ಟೆಸ್ಟ್ ಪಂದ್ಯ ಇರಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಭಾರತದ ವಿದೇಶ ಪ್ರವಾಸದಲ್ಲೂ ಹಗಲು ರಾತ್ರಿ ಟೆಸ್ಟ್ ಪಂದ್ಯ ಇರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಗಂಗುಲಿ, ಅದು ಆತಿಥೇಯ ದೇಶದ ಕ್ರಿಕೆಟ್ ಮಂಡಳಿಯ ವ್ಯಾಪ್ತಿಗೆ ಸೇರಿದ ವಿಷಯವಾಗಿದೆ ಎಂದಿದ್ದಾರೆ. 2018-19ರಲ್ಲಿ ಆಸ್ಟ್ರೇಲಿಯ ಪ್ರವಾಸದ ಸಂದರ್ಭ ಹಗಲು ರಾತ್ರಿ ಟೆಸ್ಟ್ ಪಂದ್ಯದ ಪ್ರಸ್ತಾವನೆಯನ್ನು ಭಾರತ ತಿರಸ್ಕರಿಸಿತ್ತು. ಪ್ರತಿ ವರ್ಷ ದೇಶದಲ್ಲಿ ಒಂದು ಹಗಲು ರಾತ್ರಿಯ ಟೆಸ್ಟ್ ಪಂದ್ಯ ಏರ್ಪಡಿಸಲು ನಾವು ಪ್ರಯತ್ನಿಸುತ್ತೇವೆ. ಇದಂತೂ ಖಂಡಿತ. ಆದರೆ ವಿದೇಶ ಪ್ರವಾಸದ ಸಂದರ್ಭ ಆ ದೇಶದ ಕ್ರಿಕೆಟ್ ಮಂಡಳಿ ಇಚ್ಛಿಸಿದರೆ ಹಗಲು ರಾತ್ರಿ ಟೆಸ್ಟ್ ಪಂದ್ಯ ಆಡಲು ಭಾರತ ಸಿದ್ಧ ಎಂದು ಗಂಗುಲಿ ಹೇಳಿದ್ದಾರೆ. ಟೆಸ್ಟ್ ಪಂದ್ಯಗಳ ಬಗ್ಗೆ ಪ್ರೇಕ್ಷಕರ ನಿರಾಸಕ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಂದ್ಯವನ್ನು ಆಕರ್ಷಣೀಯಗೊಳಿಸಲು ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಆದ್ಯತೆ ನೀಡಬೇಕೆಂಬ ಅಭಿಪ್ರಾಯ ಕೇಳಿಬರುತ್ತಿದೆ. ಇನ್ನೊಂದೆಡೆ, ಪ್ರಮುಖ ತಂಡಗಳ ನಡುವೆ ಸ್ಪರ್ಧಾತ್ಮಕತೆ ಕಡಿಮೆಯಾಗುತ್ತಿರುವ ಬಗ್ಗೆ ಆತಂಕವೂ ವ್ಯಕ್ತವಾಗಿದೆ. ಇತ್ತೀಚೆಗೆ ಭಾರತದೆದುರಿನ ಸರಣಿಯಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ತೋರಿದ ನಿಸ್ತೇಜ ಪ್ರದರ್ಶನ ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಗಂಗುಲಿ, ಇದೊಂದು ಸಹಜ ಪ್ರಕ್ರಿಯೆಯಾಗಿದೆ. ಪ್ರಮುಖ ಆಟಗಾರರು ನಿವೃತ್ತರಾದಾಗ ಅಥವಾ ಗಾಯ ಮತ್ತಿತರ ಕಾರಣಗಳಿಂದ ಅನುಭವಿ ಆಟಗಾರರ ಸೇವೆ ತಂಡಕ್ಕೆ ಲಭ್ಯವಿಲ್ಲದಿದ್ದಾಗ ಆ ತಂಡದ ಪ್ರದರ್ಶನ ಕಳೆಗುಂದುತ್ತದೆ. ಆಸ್ಟ್ರೇಲಿಯ, ಪಾಕಿಸ್ತಾನ, ಶ್ರೀಲಂಕಾ ಮುಂತಾದ ತಂಡಗಳನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದು ಎಂದರು. ಮುಂದಿನ ವರ್ಷ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸಿದ್ಧತೆಯ ಬಗ್ಗೆ ಉಲ್ಲೇಖಿಸಿದ ಗಂಗುಲಿ, ಮುಂದಿನ ವರ್ಷದ ಫೆಬ್ರವರಿಯವರೆಗಿನ ಅವಧಿಯಲ್ಲಿ ಭಾರತ 13 ಟ್ವೆಂಟಿ-20 ಪಂದ್ಯ ಆಡಲಿದೆ. ಆ ಬಳಿಕ ಐಪಿಎಲ್ ನಡೆಯಲಿದೆ. ಆದ್ದರಿಂದ ಭಾರತಕ್ಕೆ ಅಭ್ಯಾಸದ ಕೊರತೆ ಎದುರಾಗದು ಎಂದರು. 2020ರ ಅಕ್ಟೋಬರ್ 18ರಂದು ಪರ್ತ್‌ನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಟ್ವೆಂಟಿ-20 ತಂಡದ ನಾಯಕನಾಗಿ ಕೊಹ್ಲಿ ಬದಲು ರೋಹಿತ್ ಶರ್ಮಾರನ್ನು ನೇಮಿಸುವ ಸಲಹೆಯನ್ನು ಅವರು ತಿರಸ್ಕರಿಸಿದರು. ಎಂಎಸ್‌ಕೆ ಪ್ರಸಾದ್ ನೇತೃತ್ವದ ಈಗಿನ ಆಯ್ಕೆಮಂಡಳಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಆಡಿದ ಅನುಭವಿಗಳು ಇಲ್ಲ ಎಂಬ ವರದಿಗೆ ಪ್ರತಿಕ್ರಿಯಿಸಿದ ಗಂಗುಲಿ, ನೂತನ ಆಯ್ಕೆ ಮಂಡಳಿಯಲ್ಲಿ ಅನುಭವ ಹಾಗೂ ಕ್ಷಮತೆಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News