ಬಿಜೆಪಿ-ಕಾಂಗ್ರೆಸ್ ಜೊತೆಗೆ ಮೈತ್ರಿ ಪ್ರಶ್ನೆಯೇ ಇಲ್ಲ: ದೇವೇಗೌಡ

Update: 2019-11-05 11:44 GMT

ಬೆಂಗಳೂರು, ನ.5: ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು ಕಹಿಯನ್ನು ಅನುಭವಿಸಿದ್ದೇವೆ. ಹೀಗಾಗಿ ಮುಂದಿನ ದಿನಗಳಲ್ಲಿ ನಡೆಯುವ ಯಾವುದೇ ಚುನಾವಣೆಯಲ್ಲಿ ಈ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲವೆಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಮಂಗಳವಾರ ನಗರದ ಜೆಪಿ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ನಡೆಯುವ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾವು ಎಲ್ಲ ಕಡೆ ಸ್ಪರ್ಧೆ ಮಾಡುತ್ತೇವೆ. ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲವೆಂದು ಸ್ಪಷ್ಟಪಡಿಸಿದರು.

ಜೆಡಿಎಸ್ ಯಾವುದೇ ಕಾರಣಕ್ಕೂ ಬಿಜೆಪಿ ಬಗ್ಗೆ ಮೃದು ಧೋರಣೆ ತೋರಿಸುತ್ತಿಲ್ಲ. ಕೆಲವು ಕಾರಣಗಳಿಂದಾಗಿ ನಗರ ಪಾಲಿಕೆ, ನಗರ ಸಭೆ, ಪುರಸಭೆ ಚುನಾವಣೆಯಲ್ಲಿ ಕೆಲವು ಕಡೆ- ಮಂಗಳೂರು, ದಾವಣಗೆರೆ ನಗರಪಾಲಿಕೆಯಲ್ಲಿ ಪೂರ್ತಿ ಅಭ್ಯರ್ಥಿಗಳನ್ನು ಹಾಕಿಲ್ಲ. ಮಂಗಳೂರಿನಲ್ಲಿ 15 ಅಭ್ಯರ್ಥಿಗಳು ಮಾತ್ರ ನಿಂತಿದ್ದಾರೆ ಎಂದು ಅವರು ಹೇಳಿದರು.

ಜೆಡಿಎಸ್ ಸಾಮರ್ಥ್ಯ ಎಷ್ಟಿದೆಯೋ ಅಷ್ಟು ಸ್ಪರ್ಧೆ ಮಾಡ್ತೇವೆ. ನಾವು ಯಾರ ಜೊತೆಗೂ ನಂಟಸ್ತನ ಮಾಡುವುದಿಲ್ಲ. ನೇರವಾಗಿಯೇ ನಾವು ಚುನಾವಣೆ ಎದುರಿಸುತ್ತೇವೆ. ಇದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ. ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಕ್ಕೆ ಅವಕಾಶ ಕೊಡುವುದಿಲ್ಲವೆಂದು ಅವರು ಹೇಳಿದರು.

ವಿಧಾನಸಭೆಯ ಉಪಚುನಾವಣೆಯಲ್ಲಿ 17 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲಿದ್ದೇವೆ. ಪಕ್ಷದ ಕಾರ್ಯಕರ್ತರಿಗೆ ನಿರಾಸೆ ಬಾರದ ರೀತಿ ಎಲ್ಲಾ ಕಡೆ ಅಭ್ಯರ್ಥಿ ಹಾಕುವ ಬಗ್ಗೆ ತೀರ್ಮಾನ ಮಾಡಿದ್ದೀವಿ. ಈಗಾಗಲೇ ಅಭ್ಯರ್ಥಿ ಗುರುತಿಸುವ ಬಗ್ಗೆ ಅಂತಿಮ ಚರ್ಚೆ ಆಗಿದೆ. ಶೇ.70 ರಷ್ಟು ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಕೆಲವು ಕಡೆ ಯುವಕರು ಮುಂದೆ ಬರುತ್ತಿರುವುದು ಸಂತೋಷವನ್ನು ತಂದಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ನ.15ರಂದು ಬಿಎಸ್‌ವೈ ಮನೆ ಮುಂದೆ ಧರಣಿ

ಗುರುಮಿಠಕಲ್ ಶಾಸಕ ನಾಗನಗೌಡ ಕಂದಕೂರ ಪುತ್ರ ಶರಣಗೌಡ ಕಂದಕೂರ ಮೇಲೆ ಪೊಲೀಸ್ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಸೇರಿದಂತೆ ಸಂಬಂಧಿಸಿದ ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಮಾಡಿದ್ದೆ. ಆದರೆ, ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ನ.15ರಂದು ಬಿ.ಎಸ್.ಯಡಿಯೂರಪ್ಪ ಮನೆ ಮುಂದೆ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ಧರಣಿ ಕುಳಿತುಕೊಳ್ಳಲಾಗುವುದು. ನಮ್ಮ ಪಕ್ಷದ ಯುವ ಮುಖಂಡನ ಬಾಯಿಗೆ ಪೊಲೀಸ್ ಅಧಿಕಾರಿ ಪಿಸ್ತೂಲ್ ಇಟ್ಟು ಹಿಂಸೆ ಕೊಟ್ಟಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಆಗುತ್ತಿರುವ ಕಿರುಕುಳ ನಿಲ್ಲಬೇಕು. ಈ ಬಗ್ಗೆ ಯಡಿಯೂರಪ್ಪ ಸೂಕ್ತ ಭರವಸೆ ನೀಡುವವವರಿಗೆ ಧರಣಿಯನ್ನು ಹಿಂಪಡೆಯುವುದಿಲ್ಲ.

-ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News