ಬೆಂಗಳೂರು: ವೈದ್ಯರ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

Update: 2019-11-05 12:33 GMT

ಬೆಂಗಳೂರು, ನ.5: ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಕಿರಿಯ ವೈದ್ಯರು ಕರೆ ನೀಡಿದ್ದ ರಾಜ್ಯ ವ್ಯಾಪಿ ಮುಷ್ಕರಕ್ಕೆ ಬೆಂಗಳೂರಿನಲ್ಲಿಯೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವೈದ್ಯರು ಕರ್ತವ್ಯಕ್ಕೆ ಹಾಜರಾದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಆಸ್ಪತ್ರೆಗಳಲ್ಲಿ ಎಂದಿನಂತೆ ಕಾರ್ಯ ಚಟುವಟಿಕೆಗಳು ಕಂಡು ಬಂದವು.

ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ತುರ್ತು ಸೇವೆಗಳನ್ನು ಹೊರತುಪಡಿಸಿ ಒಪಿಡಿ ಸೇರಿದಂತೆ ಉಳಿದ ಸೇವೆಗಳನ್ನು ಸ್ಥಗಿತ ಮಾಡುವಂತೆ ವೈದ್ಯರು ಕರೆ ನೀಡಿದ್ದರು. ಆದರೆ, ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದ ಪರಿಣಾಮ ವೈದ್ಯರು ಎಂದಿನಂತೆ ಸೇವೆಗೆ ಹಾಜರಾಗಿದ್ದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುನ್ನೆಚ್ಚರಿಕೆ ಕೈಗೊಂಡು, ಸರಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿತ್ತು. ಇದರಿಂದಾಗಿ ವಿಕ್ಟೋರಿಯಾ, ಕೆ.ಸಿ. ಜನರಲ್, ಜಯನಗರ ಸರಕಾರಿ ಆಸ್ಪತ್ರೆ, ವಾಣಿವಿಲಾಸ ಸೇರಿದಂತೆ ವಿವಿಧ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳವಾಗಿದ್ದರೂ ವೈದ್ಯಕೀಯ ಸೇವೆಯಲ್ಲಿ ಯಾವುದೇ ವ್ಯತ್ಯಯ ಕಂಡುಬರಲಿಲ್ಲ. ಸತತ ಐದನೇ ದಿನವೂ, ಮಿಂಟೋ ಆಸ್ಪತ್ರೆಯ ಕಿರಿಯ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಮಾತ್ರ ಚಾಮರಾಜಪೇಟೆಯ ಮಿಂಟೋ ಆಸ್ಪತ್ರೆಯ ಆವರಣದೊಳಗೆ ಪ್ರತಿಭಟನೆ ಮುಂದುವರೆಸಿ ತಪ್ಪಿತಸ್ಥರನ್ನು ಈ ಕೂಡಲೇ ಬಂಧಿಸಬೇಕು ಎಂದು ಪ್ರತಿಭಟನೆ ನಡೆಸಿದರು.

ಏಕೆ ಪ್ರತಿಭಟನೆ?

ಜುಲೈ ತಿಂಗಳಲ್ಲಿ 24 ಮಂದಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಆಗಿತ್ತು. ನಂತರ ಕಣ್ಣಿಗೆ ಹಾಕಿದ ಔಷಧಿಯಿಂದ 10 ಜನರು ಕಣ್ಣಿನ ದೃಷ್ಟಿ ಸಂಪೂರ್ಣವಾಗಿ ಕಳೆದುಕೊಂಡಿದ್ದರು. ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಿಂಟೋ ಆಸ್ಪತ್ರೆ ವೈದ್ಯರ ನಡುವೆ ಘರ್ಷಣೆ ನಡೆದಿತ್ತು. ನ.4ರಂದು ಪ್ರತಿಭಟನಾ ಸ್ಥಳಕ್ಕೆ ಉಪಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ ಭೇಟಿ ನೀಡಿ ಮಾತುಕತೆ ನಡೆಸಿದ್ದರೂ, ವೈದ್ಯರ ಮನವೊಲಿಕೆಯ ಪ್ರಯತ್ನ ಕೈಗೂಡಲಿಲ್ಲ. ಇದರ ಬೆನ್ನಲ್ಲೇ ಮಂಗಳವಾರ ರಾಜ್ಯಾದ್ಯಂತ ಮುಷ್ಕರಕ್ಕೆ ಕೆಲ ವೈದ್ಯರು ಕರೆ ನೀಡಿದ್ದರು.

ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ

ಮೂರು ತಿಂಗಳ ಹಿಂದೆ ಮಿಂಟೋ ವೈದ್ಯರ ನಿರ್ಲಕ್ಷದಿಂದ ದೃಷ್ಟಿ ಕಳೆದುಕೊಂಡ ಪೈಕಿ ಕೆಲವರು ಇಲ್ಲಿನ ವಿವಿಪುರಂ ಪೊಲೀಸ್ ಠಾಣೆಗೆ ದೂರು ನೀಡಿ, ಪ್ರಕರಣ ದಾಖಲಿಸಿದ್ದರು. ಇದನ್ನು ಮಚ್ಚಿಹಾಕಲು ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ತಾರ್ಕಿಕ ಅಂತ್ಯ

ಮಿಂಟೋ ಆಸ್ಪತ್ರೆ ಮುಷ್ಕರ ಪ್ರಕರಣವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸುವ ಪ್ರಯತ್ನ ಮಾಡಲಾಗುವುದು

-ಡಾ.ಸಿ.ಎನ್.ಅಶ್ವತ್ ನಾರಾಯಣ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News