ಟೆಸ್ಟ್ ಕ್ರಿಕೆಟ್‌ನಲ್ಲಿ ವೀಕ್ಷಕ ವಿವರಣೆಗಾರನಾಗಿ ಧೋನಿ?

Update: 2019-11-07 02:59 GMT

ಹೊಸದಿಲ್ಲಿ, ನ.6: ಟೆಸ್ಟ್ ಕ್ರಿಕೆಟ್‌ಗೆ 2014ರಲ್ಲಿ ವಿದಾಯ ಹೇಳಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವೀಕ್ಷಕವಿವರಣೆಗಾರನಾಗಿ ಕಾರ್ಯನಿರ್ವಹಿಸುವ ಮೂಲಕ ವೃತ್ತಿಜೀವನದಲ್ಲಿ ಹೊಸ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಕೋಲ್ಕತಾದ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುವ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಧೋನಿ ವೀಕ್ಷಕವಿವರಣೆಗಾರನಾಗಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬ ಕುತೂಹಲ ಎಲ್ಲರಲ್ಲಿದೆ.

 ಪಂದ್ಯದ ಪ್ರಸಾರದ ಹೊಣೆ ಹೊತ್ತಿರುವ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ಇಂತಹದ್ದೊಂದು ಪ್ರಸ್ತಾವವನ್ನು ಬಿಸಿಸಿಐಗೆ ಕಳುಹಿಸಿಕೊಟ್ಟಿದೆ. ಆದರೆ, ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಈತನಕ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಧೋನಿಯ ಆಪ್ತ ಮೂಲಗಳ ಪ್ರಕಾರ ಧೋನಿ ಬಾಂಗ್ಲಾದೇಶ ವಿರುದ್ಧದ ಡೇ-ನೈಟ್ ಪಂದ್ಯದಲ್ಲೇ ವೀಕ್ಷಕವಿವರಣೆಗಾರನಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ.

ಧೋನಿ ವೀಕ್ಷಕವಿವರಣೆಗಾರನಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಈಗಿನ ಬಿಸಿಸಿಐ ನಿಯಮಾವಳಿ ಪ್ರಕಾರ ಧೋನಿ ವೀಕ್ಷಕವಿವರಣೆ ನೀಡಲು ಮುಂದಾದರೆ ಅವರು ಸ್ವಹಿತಾಸಕ್ತಿ ಸಂಘರ್ಷ ಎದುರಿಸಬೇಕಾಗುತ್ತದೆ ಎಂದು ಧೋನಿಯ ಆಪ್ತ ವಲಯ ಪಿಟಿಐಗೆ ತಿಳಿಸಿದೆ.

‘‘ಹೌದು, ಪ್ರಸಾರ ಸಂಸ್ಥೆ ಪ್ರಸ್ತಾವವೊಂದನ್ನು ಕಳುಹಿಸಿಕೊಟ್ಟಿದೆ. ಆದರೆ, ಈ ತನಕ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಒಂದು ವೇಳೆ ಕ್ರಿಕೆಟ್ ಮಂಡಳಿ ಅನುಮತಿ ನೀಡಿದರೆ ಈಡನ್‌ಗಾರ್ಡನ್ಸ್‌ನಲ್ಲಿ ನ.22ರಿಂದ 26ರ ತನಕ ನಡೆಯುವ ಹಗಲು-ರಾತ್ರಿ ಟೆಸ್ ್ಟ ನಲ್ಲಿ ಧೋನಿ ವೀಕ್ಷಕವಿವರಣೆಗಾರನಾಗಿ ಕಾರ್ಯನಿರ್ವಹಿಸಲಿದ್ದಾರೆ’’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಭಾರತ ವಿರುದ್ಧ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯವನ್ನು ಹಗಲು-ರಾತ್ರಿ ಆಡುವ ಬಿಸಿಸಿಐ ಪ್ರಸ್ತಾವವನ್ನು ಅಕ್ಟೋಬರ್ 29ರಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ)ಒಪ್ಪಿಕೊಂಡಿತ್ತು.

 ಸದ್ಯ ಭಾರತ ಹಾಗೂ ಬಾಂಗ್ಲಾದೇಶದ ನಡುವೆ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯು ನಡೆಯುತ್ತಿದೆ. ಪ್ರವಾಸಿ ಬಾಂಗ್ಲಾದೇಶ ದಿಲ್ಲಿಯಲ್ಲಿ ನಡೆದಿದ್ದ ಮೊದಲ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಈ ವರ್ಷಾರಂಭದಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಭಾರತ ತಂಡ ನ್ಯೂಝಿಲ್ಯಾಂಡ್ ವಿರುದ್ಧ ಸೋಲುಂಡ ಬಳಿಕ ಧೋನಿ ಯಾವುದೇ ಅಂತರ್‌ರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಹೀಗಾಗಿ ಧೋನಿಯ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ಊಹಾಪೋಹ ಕೇಳಿಬಂದಿತ್ತು. ಆದರೆ, ಧೋನಿ ಈ ತನಕ ಯಾವುದೇ ಹೇಳಿಕೆಯನ್ನು ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News