ವಿಶ್ವಕಪ್ ಅರ್ಹತಾ ಪಂದ್ಯಕ್ಕೆ ಭಾರತ ಫುಟ್ಬಾಲ್ ತಂಡ

Update: 2019-11-07 03:02 GMT

  ಹೊಸದಿಲ್ಲಿ, ನ.6: ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ಹಾಗೂ ಒಮಾನ್ ವಿರುದ್ಧದ 2022ರ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ 26 ಸದಸ್ಯರುಗಳನ್ನೊಳಗೊಂಡ ಭಾರತದ ಫುಟ್ಬಾಲ್ ತಂಡವನ್ನು ಪ್ರಕಟಿಸಲಾಗಿದ್ದು, ಯುವ ಗೋಲ್‌ಕೀಪರ್ ಧೀರಜ್ ಸಿಂಗ್ ಮೊದಲ ಬಾರಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮುಖ್ಯ ಕೋಚ್ ಇಗೊರ್ ಸ್ಟಿಮ್ಯಾಕ್ ಅವರು ಧೀರಜ್‌ರನ್ನು ಭಾರತೀಯ ತಂಡಕ್ಕೆ ಸೇರ್ಪಡೆಗೊಳಿಸಿದ್ದಾರೆ.

  ಭಾರತ ತಟಸ್ಥ ತಾಣ ತಜಕಿಸ್ತಾನದ ರಾಜಧಾನಿ ಡುಶಾಂಬೆಯಲ್ಲಿ ಅಫ್ಘಾನಿಸ್ತಾನ ವಿರುದ್ಧ ನ.14ರಂದು ಅರ್ಹತಾ ಪಂದ್ಯವನ್ನು ಆಡಲಿದೆ. ಬ್ಲೂ ಟೈಗರ್ಸ್ ಖ್ಯಾತಿಯ ಭಾರತ ನ.19ರಂದು ಮಸ್ಕತ್‌ನಲ್ಲಿ ಒಮಾನ್ ವಿರುದ್ಧ 2ನೇ ಪಂದ್ಯವನ್ನು ಆಡಲಿದೆ. ಭಾರತ ಸೆ.5ರಂದು ಗುವಾಹಟಿಯಲ್ಲಿ ನಡೆದಿದ್ದ ಒಮಾನ್ ವಿರುದ್ಧದ ಪಂದ್ಯವನ್ನು 1-2 ಗೋಲುಗಳ ಅಂತರದಿಂದ ಸೋತಿತ್ತು. 2017ರ ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ಧೀರಜ್ ಅವರ ಪ್ರದರ್ಶನ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ನಾಯಕ ಅಮರ್‌ಜೀತ್ ಸಿಂಗ್ ಹಾಗೂ ಡಿಫೆಂಡರ್ ಅನ್ವರ್ ಅಲಿ ಬಳಿಕ ಅಂಡರ್-17 ತಂಡದಿಂದ ಸೀನಿಯರ್ ತಂಡದ ಶಿಬಿರಕ್ಕೆ ಕರೆ ಪಡೆದ ಭಾರತದ ಮೂರನೇ ಆಟಗಾರನಾಗಿದ್ದಾರೆ. ಮೂರು ಪಂದ್ಯಗಳಲ್ಲಿ ಎರಡು ಅಂಕ ಪಡೆಯಲು ಶಕ್ತವಾಗಿರುವ ಭಾರತ ‘ಇ’ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ(1-1) ವಿರುದ್ಧ ಡ್ರಾ ಸಾಧಿಸಿರುವ ಭಾರತ, ಏಶ್ಯನ್ ಚಾಂಪಿಯನ್ ಖತರ್ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿತ್ತು.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News