ಕೂಡಂಕುಳಂ ಅಣುಸ್ಥಾವರದಿಂದ ತಂತ್ರಜ್ಞಾನ ದತ್ತಾಂಶ ಕದ್ದ ಉತ್ತರ ಕೊರಿಯಾದ ಹ್ಯಾಕರ್ ಗಳು: ವರದಿ

Update: 2019-11-07 08:48 GMT
 PTI

ಚೆನ್ನೈ, ನ.7: ಉತ್ತರ ಕೊರಿಯಾದ ಶಂಕಿತ ಹ್ಯಾಕರ್ ಗಳು ತಮಿಳುನಾಡಿನ ಕೂಡಂಕುಳಂ ಅಣುವಿದ್ಯುತ್ ಸ್ಥಾವರದ ಕಂಪ್ಯೂಟರ್ ಗಳಿಂದ ತಂತ್ರಜ್ಞಾನ ಸಂಬಂಧಿತ ದತ್ತಾಂಶ ಕದ್ದಿದ್ದಾರೆಂದು The Quint ವರದಿ ತಿಳಿಸಿದೆ.

ದತ್ತಾಂಶ ಸೋರಿಕೆ ಮಾಡುವಂತಹ ಮಾಲ್ವೇರ್ ಮೂಲಕ ಉತ್ತರ ಕೊರಿಯಾ ಸರಕಾರದ ಬೆಂಬಲ ಹೊಂದಿರುವ ಸೈಬರ್ ದಾಳಿಕೋರರು ಈ ಕೃತ್ಯ ಎಸಗಿದ್ದಾರೆಂದು ದಕ್ಷಿಣ ಕೊರಿಯಾ ಮೂಲದ ಮಾಲ್ವೇರ್ ವಿಶ್ಲೇಷಕ ತಂಡ ಇಶ್ಯೂಮೇಕರ್ ಲ್ಯಾಬ್ಸ್ ಸಂಸ್ಥಾಪಕ ಸೈಮನ್ ಚೊಯ್ ಹೇಳಿದ್ದಾರೆ.

ಸ್ಥಾವರದಲ್ಲಿನ ಕಂಪ್ಯೂಟರುಗಳಲ್ಲೊಂದರಲ್ಲಿ ಮಾಲ್ವೇರ್ ಇರುವ ಬಗ್ಗೆ ಸರಕಾರಿ ಒಡೆತನದ ಅಣು ವಿದ್ಯುತ್ ನಿಗಮ ಅಕ್ಟೋಬರ್ 30ರಂದು ಒಪ್ಪಿತ್ತಾದರೂ ಯಾವುದೇ ಕಂಪ್ಯೂಟರ್ ಈ ದಾಳಿಯಿಂದ ಬಾಧಿತವಾಗಿಲ್ಲ ಎಂದು ಹೇಳಿಕೊಂಡಿತ್ತು. ಸೈಬರ್ ದಾಳಿ ಸಾಧ್ಯತೆಯನ್ನು ಸ್ಥಾವರದ ಮಾಹಿತಿ ಅಧಿಕಾರಿ ಖಡಾಖಂಡಿತವಾಗಿ ನಿರಾಕರಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ರಷ್ಯಾ ನಿರ್ಮಿತ ರಿಯಾಕ್ಟರಿನ ಡೊಮೇನ್ ಕಂಟ್ರೋಲರ್ ಹಂತದಲ್ಲಿ ದತ್ತಾಂಶ ಸೋರಿಕೆಯಾಗಿರಬಹುದೆಂದು ಅಕ್ಟೋಬರ್ 30ರಂದು ಟ್ವಿಟರಿಗರೊಬ್ಬರು ದೂರಿದ್ದರು.

ಉತ್ತರ ಕೊರಿಯಾದ ಒಂದಕ್ಕಿಂತ ಹೆಚ್ಚು ಹ್ಯಾಕರುಗಳ ತಂಡ ಇದರ ಹಿಂದಿರಬೇಕೆಂದು ಇಶ್ಯೂ ಮೇಕರ್ಸ್ ಲ್ಯಾಬ್ ಹೇಳಿದೆ. ಉತ್ತರ ಕೊರಿಯಾದಲ್ಲಿ ಏಳು ಹ್ಯಾಕರ್ ತಂಡಗಳಿವೆ ದಕ್ಷಿಣ ಕೊರಿಯಾದ ಸರಕಾರಿ ವೆಬ್ ಸೈಟ್ ಅನ್ನು 2009ರಲ್ಲಿ ಹಾಗೂ ಸೋನಿ ಪಿಕ್ಚರ್ಸ್ ಅನ್ನು 2014ರಲ್ಲಿ ಹ್ಯಾಕ್ ಮಾಡಿದ ಗ್ರೂಪ್ ಎ ಅನ್ನು ಲಝಾರಸ್ ಗ್ರೂಪ್, 2013ರಲ್ಲಿ ಕೊರಿಯಾದ ಸೇನೆ ಹಾಗೂ  ಕೊರಿಯಾದ ಬ್ಯಾಂಕುಗಳ ಮೇಲೆ ಹ್ಯಾಕಿಂಗ್ ನಡೆಸಿದ ಗ್ರೂಪ್ ಬಿಯನ್ನು ಡಾರ್ಕ್ ಸಿಯೋಲ್ ಅಥವಾ ಆಪರೇಶನ್ ಟ್ರಾಯ್  ಹಾಗೂ ಭಾರತದ ಅಣು ವಿದ್ಯುತ್ ಸ್ಥಾವರದ ಮೇಲೆ ಸೈಬರ್ ದಾಳಿ ನಡೆಸಿದ ತಂಡ ಗ್ರೂಪ್ ಸಿ ಆಗಿರಬೇಕು ಎಂದು ಇಶ್ಯೂ ಮೇಕರ್ಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News