ಕ್ರಿಕೆಟ್ ಆಟಗಾರರನ್ನು ಬಂಧಿಸದಂತೆ ರಾಜಕಾರಣಿ, ಉದ್ಯಮಿಗಳಿಂದ ಒತ್ತಡ: ಪೊಲೀಸ್ ಆಯುಕ್ತ ಭಾಸ್ಕರ್‌ ರಾವ್ ಆರೋಪ

Update: 2019-11-07 14:14 GMT

ಬೆಂಗಳೂರು, ನ.7: ಕೆಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಕೆಲ ಪ್ರತಿಷ್ಠಿತ ಆಟಗಾರರನ್ನ ಬಂಧಿಸಬೇಡಿ ಎಂದು ರಾಜಕಾರಣಿಗಳು ಹಾಗೂ ಉದ್ಯಮಿಗಳಿಂದ ಒತ್ತಡ ಬರುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಟ್ಟಿಂಗ್ ಪ್ರಕರಣದಲ್ಲಿ ಕ್ರಿಕೆಟ್ ಆಟಗಾರರನ್ನು ಬಂಧಿಸಿದರೆ ಅವರ ಭವಿಷ್ಯ ಹಾಳಾಗುತ್ತದೆ. ಹೀಗಾಗಿ ಆಟಗಾರರನ್ನು ಬಂಧಿಸದೆ ಒಂದು ಅವಕಾಶ ಮಾಡಿಕೊಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಆದರೂ ನಾವು ತನಿಖೆ ಮುಂದುವರೆಸಿದ್ದೇವೆಂದು ತಿಳಿಸಿದರು.

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ ಸಂಬಂಧ ಬೆಳಗಾವಿ ಫ್ಯಾಂಥರ್ಸ್ ತಂಡದ ಮಾಲಕನನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ, ಪ್ರಕರಣದಲ್ಲಿ ಪ್ರತಿಷ್ಠಿತ ಬೌಲರ್‌ಗಳು, ಬ್ಯಾಟ್ಸ್‌ಮನ್‌ಗಳು ಭಾಗಿಯಾಗಿರುವ ಕುರಿತು ಹೇಳಿಕೆ ನೀಡಿದ್ದಾನೆ. ಈ ಸಂಬಂಧ ಆಟಗಾರರಾದ ಸಿಎಂ ಗೌತಮ್ ಹಾಗೂ ಅಬ್ರಾರ್ ಖಾಝಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಈ ಕೆಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ತಂಡದ ಮಾಲಕರು, ದಳ್ಳಾಳಿಗಳು ಹಾಗೂ ಅಧಿಕಾರಿಗಳ ಪಾತ್ರ ಇರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಹೀಗಾಗಿ ಕ್ರಿಕೆಟ್ ಆಟಗಾರರನ್ನು ಬಂಧನ ಮಾಡಬೇಡಿ ಎಂದು ಒತ್ತಡಗಳು ಬರುತ್ತಿವೆ. ಆದರೆ, ಪೊಲೀಸರು ಯಾವ ಒತ್ತಡಕ್ಕೂ ಮಣಿಯದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಹಲವು ಆಟಗಾರರು, ಬುಕ್ಕಿಗಳು ಸಿಕ್ಕಿ ಬೀಳುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News