ರೋಹಿತ್ ಸ್ಫೋಟಕ ಬ್ಯಾಟಿಂಗ್: ಬಾಂಗ್ಲಾ ವಿರುದ್ಧ ಭಾರತಕ್ಕೆ 8 ವಿಕೆಟ್ ಗಳ ಜಯ

Update: 2019-11-08 05:45 GMT

ರಾಜ್‌ಕೋಟ್, ನ.7: ನಾಯಕ ರೋಹಿತ್ ಶರ್ಮಾ ಬಾರಿಸಿದ ಆಕರ್ಷಕ 85 ರನ್‌ಗಳ ನೆರವಿನಿಂದ ಭಾರತ ಇಲ್ಲಿ ನಡೆದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ. ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 154 ರನ್ ಗಳಿಸಬೇಕಾದ ಭಾರತ ತಂಡ 15.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ ಗೆಲುವಿಗೆ ಅಗತ್ಯದ ರನ್ ಸೇರಿಸಿತು.

ರೋಹಿತ್ ಶರ್ಮಾ 85 (43ಎ, 6ಬೌ,6 ಸಿ) ರನ್ ಗಳಿಸಿದರು. ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ 10.5 ಓವರ್‌ಗಳಲ್ಲಿ 118 ರನ್ ಗಳಿಸುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ರೋಹಿತ್‌ಗೆ ಉತ್ತಮ ಬೆಂಬಲ ನೀಡಿದ ಧವನ್ 31 ರನ್(27ಎ, 4ಬೌ) ಗಳಿಸಿ ಅನಿಮುಲ್ ಇಸ್ಲಾಂ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಶತಕದ ನಿರೀಕ್ಷೆಯಲ್ಲಿದ್ದ ರೋಹಿತ್ ಶರ್ಮಾಗೆ ಅನಿಮುಲ್ ಇಸ್ಲಾಂ ಅವಕಾಶ ನೀಡಲಿಲ್ಲ. ಲೋಕೇಶ್ ರಾಹುಲ್ ಔಟಾಗದೆ 8 ರನ್ ಮತ್ತು ಶ್ರೇಯಸ್ ಅಯ್ಯರ್ 24 ರನ್(13ಎ, 3ಬೌ, 1ಸಿ)ಗಳಿಸಿದರು.

 ಬಾಂಗ್ಲಾ 153/6: ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿ ಗೆಲುವು ದಾಖಲಿಸಿದ ಪ್ರವಾಸಿ ಬಾಂಗ್ಲಾದೇಶ ಎರಡನೇ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 153 ರನ್ ಗಳಿಸಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾದೇಶ ತಂಡಕ್ಕೆ ಎರಡನೇ ಪಂದ್ಯದಲ್ಲಿ ಭಾರತಕ್ಕೆ ಕಠಿಣ ಸವಾಲು ವಿಧಿಸಲು ಸಾಧ್ಯವಾಗಲಿಲ್ಲ. ತಂಡದ ಪರ ಯಾರಿಂದಲೂ ಅರ್ಧಶತಕದ ಕೊಡುಗೆ ಲಭ್ಯವಾಗಲಿಲ್ಲ. ಮುಹಮ್ಮದ್ ನಯೀಮ್(36) ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಲಿಟನ್ ದಾಸ್ ಮತ್ತು ನಯೀಮ್ ಮೊದಲ ವಿಕೆಟ್‌ಗೆ 7.2 ಓವರ್‌ಗಳಲ್ಲಿ 60 ರನ್ ಸೇರಿಸಿದರು. ಲಿಟನ್ ದಾಸ್ 21 ಎಸೆತಗಳಲ್ಲಿ 4 ಬೌಂಡರಿಗಳ ಸಹಾಯದಿಂದ 29 ರನ್ ಗಳಿಸಿ ಔಟಾದರು.

ನಯೀಮ್ 10.3ನೇ ಓವರ್‌ನಲ್ಲಿ ವಾಶಿಂಗ್ಟನ್ ಸುಂದರ್ ಎಸೆತದಲ್ಲಿ ಶ್ರೇಯಸ್ ಅಯ್ಯರ್‌ಗೆ ಕ್ಯಾಚ್ ನೀಡಿದರು. ಔಟಾಗುವ ಮೊದಲು ನಯೀಮ್ 36 ರನ್ (31ಎ, 5ಬೌ) ಗಳಿಸಿದರು.

 ಕಳೆದ ಪಂದ್ಯದ ಹೀರೊ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮುಶ್ಫಿಕುರ್ರಹೀಮ್ ಅವರಿಗೆ ಚಹಾಲ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಅವಕಾಶ ನೀಡಲಿಲ್ಲ. ಅವರು ಕೇವಲ 4 ರನ್ ಗಳಿಸಿದರು. ಸೌಮ್ಯ ಸರ್ಕಾರ್ 30 ರನ್ (20ಎ, 2ಬೌ,1ಸಿ) ಗಳಿಸಿ ಚಹಾಲ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ಮಹಮ್ಮದುಲ್ಲಾ 30 ರನ್(21ಎ, 4ಬೌ), ಆಫಿಫ್ ಹುಸೈನ್ 6 ರನ್ ಗಳಿಸಿ ಔಟಾದರು.

ಮೊಸಾದೆಕ್ ಹುಸೈನ್ ಮತ್ತು ಆಮಿನುಲ್ ಇಸ್ಲಾಂ ಔಟಾಗದೆ ತಲಾ 6 ರನ್‌ಗಳ ಕೊಡುಗೆ ನೀಡಿದರು. ಬಾಂಗ್ಲಾ ತಂಡದ ಪರ 16 ಬೌಂಡರಿ ಮತ್ತು 1 ಸಿಕ್ಸರ್ ದಾಖಲಾಗಿತ್ತು. ಸೌಮ್ಯ ಸರ್ಕಾರ್ ಏಕೈಕ ಸಿಕ್ಸರ್ ಸಿಡಿಸಿದರು.

 ಭಾರತದ ಯಜುವೇಂದ್ರ ಚಹಾಲ್ 28ಕ್ಕೆ 2 ವಿಕೆಟ್, ದೀಪಕ್ ಚಹಾರ್, ಖಲೀಲ್ ಅಹ್ಮದ್ ಮತ್ತು ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಹಂಚಿಕೊಂಡರು. ಶಿವಂ ದುಬೆ ಮತ್ತು ಕೃನಾಲ್ ಪಾಂಡ್ಯ ತಲಾ ಎರಡು ಓವರ್‌ಗಳ ಬೌಲಿಂಗ್ ನಡೆಸಿದ್ದರೂ ವಿಕೆಟ್ ಪಡೆಯದೆ ಕೈ ಸುಟ್ಟುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News