ಜಾಗತೀಕರಣದಿಂದ ಅಸ್ಮಿತೆಗೆ ಪೆಟ್ಟು: ತೆಲುಗಿನ ಹಿರಿಯ ಕವಿ ಶಿವರೆಡ್ಡಿ

Update: 2019-11-08 12:33 GMT

ಬೆಂಗಳೂರು, ನ.8: ಜಾಗತೀಕರಣವು ನಮ್ಮ ಬದುಕಿಗೆ ಸಾವಿರ ದಾರಿಗಳನ್ನು ಕಲ್ಪಿಸಿರಬಹುದು. ಆದರೆ, ಈ ಯಾವ ದಾರಿಯಿಂದಲೂ ವ್ಯಕ್ತಿ ಹಾಗೂ ದೇಶ ತನ್ನ ಅಸ್ಮಿತೆಯನ್ನು ಕಂಡುಕೊಳ್ಳಲಾರದೆಂದು ತೆಲುಗಿನ ಹಿರಿಯ ಕವಿ ಶಿವರೆಡ್ಡಿ ಅಭಿಪ್ರಾಯಿಸಿದ್ದಾರೆ.

ಶುಕ್ರವಾರ ಕೇಂದ್ರ ಸಾಹಿತ್ಯ ಅಕಾಡೆಮಿ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ತೆಲುಗು ಹಾಗೂ ಕನ್ನಡ ಕಿರುಕತೆಗಳು-ಜಾಗತೀಕರಣದ ಪರಿಣಾಮಗಳ ಬಗ್ಗೆ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಜಾಗತೀಕರಣದಲ್ಲಿ ಯಂತ್ರಗಳಿಗೆ ಮಾನ್ಯತೆ ಇದೆಯೇ ಹೊರತು ಮಾನವೀಯ ಮೌಲ್ಯಗಳಿಗಲ್ಲವೆಂದು ತಿಳಿಸಿದರು.

ಇವತ್ತು ಜಗತ್ತನ್ನು ಆಳುತ್ತಿರುವುದು ಮೊಬೈಲ್, ಕಂಪ್ಯೂಟರ್‌ಗಳೇ ಹೊರತು ಮಾನವ ಸಂಬಂಧಗಳಲ್ಲ. ಯಂತ್ರಗಳ ಆಧಾರದಲ್ಲಿ ಮಾನವನ ಚಿಂತನೆಗಳು ರೂಪ ತಾಳುತ್ತಿರುವುರಿಂದ ಮನುಷ್ಯ ಸಂಬಂಧಗಳಿಗೆ ಅರ್ಥವೇ ಇಲ್ಲವಾಗಿದೆ. ಎಲ್ಲವೂ ವ್ಯವಹಾರವೇ ಆಗಿರುವ ಈ ಸಂದರ್ಭದಲ್ಲಿ ಮಾನವೀಯ ನೆಲೆಯಲ್ಲಿ ಸಾಹಿತ್ಯ ರಚಿಸುವುದು ಸವಾಲಿನ ಸಂಗತಿಯೆಂದು ಅವರು ಹೇಳಿದರು.

ಲೇಖಕಿ ಚಲಪತಿ ಸ್ವರೂಪ ರಾಣಿ, ದಲಿತ ಸಾಹಿತ್ಯದಲ್ಲಿ ಜಾಗತೀಕರಣದ ಸ್ವರೂಪದ ಕುರಿತು ಮಾತನಾಡಿ, ಎಡವಾದಿ ಚಿಂತಕರು ಜಾಗತೀಕರಣವನ್ನು ವಿರೋಧಿಸಿದಂತೆ ದಲಿತ ಸಾಹಿತಿಗಳು, ಚಿಂತಕರು ವಿರೋಧಿಸುವುದಿಲ್ಲ. ಜಾಗತೀಕರಣದ ಪ್ರಭಾವದಿಂದಾಗಿ ದಲಿತ ಸಮುದಾಯದ ತಮ್ಮ ಕುಲಕಸುಬುಗಳಿಂದ ಹೊರಬಂದು ಕೈಗಾರಿಕೆಗಳಲ್ಲಿ ದುಡಿಯಲು ಪ್ರಾರಂಭಿಸಿದ್ದಾರೆ. ಅಷ್ಟರ ಮಟ್ಟಿಗೆ ಶೋಷಣೆಯ ಬಿಗಿಮುಷ್ಟಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಹಾಯ ಮಾಡಿದೆ ಎಂದು ತಿಳಿಸಿದರು.

ರೈಲು ಸಂಪರ್ಕದಿಂದ ಜನಗಳ ನಡುವೆ ಸಂವಹನ ಹೆಚ್ಚಾಗುತ್ತದೆ. ಸರಕು ಸರಂಜಾಮುಗಳ ಸಾಗಾಟ ಹೆಚ್ಚಳದಿಂದ ಸಣ್ಣಪುಟ್ಟ ಕೈಗಾರಿಕೆಗಳು ಪ್ರಾರಂಭಗೊಳ್ಳುತ್ತದೆ. ಇದು ಕುಲಕಸುಬುಗಳ ನಿರ್ಮೂಲನೆಗೆ ಸಹಾಯಕವಾಗಲಿದೆ ಎಂದು ಕಮ್ಯೂನಿಸ್ಟ್ ಚಿಂತಕ ಕಾರ್ಲ್‌ಮಾರ್ಕ್ಸ್ ಹೇಳಿದ್ದಾರೆ. ಇದೇ ದಾಟಿಯಲ್ಲಿಯೇ ಜ್ಯೋತಿಬಾ ಫುಲೆ, ಡಾ.ಬಿ.ಆರ್.ಅಂಬೇಡ್ಕರ್ ಕೂಡ ಪ್ರತಿಪಾದಿಸಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಮಹಾಲಿಂಗೇಶ್ವರ, ಕೆ.ಆಶಾ ಜ್ಯೋತಿ, ವಾಸಿರೆಡ್ಡಿ ನವೀನ್, ಕತೆಗಾರ ವಸುದೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯದಲ್ಲಿ ಸಲಿಂಗ ಲೈಂಗಿಕತೆಯ ಕುರಿತು ಶಿವರಾಮ ಕಾರಂತ, ಯು.ಆರ್.ಅನಂತಮೂರ್ತಿ, ಕುಂ.ವೀರಭದ್ರಪ್ಪ, ಕಾಮರೂಪಿ ಸೇರಿದಂತೆ ಯಾರು ಕೂಡ ಸಕಾರಾತ್ಮಕವಾಗಿ ಚಿತ್ರಸದೆ, ಅದೊಂದು ರೋಗವೆಂದು, ಕೆಟ್ಟದ್ದು ಎಂಬ ರೀತಿಯಲ್ಲಿ ನಿರೂಪಿಸಿದ್ದಾರೆ. ಆದರೆ, ಜಾಗತೀಕರಣದ ಪ್ರಭಾವದಿಂದಾಗಿ ಮೊಬೈಲ್, ಕಂಪ್ಯೂಟರ್ ಹೆಚ್ಚಾದಂತೆ ಸಲಿಂಗ ಲೈಂಗಿಕತೆಯ ಕುರಿತು ಅರಿವು ಹೆಚ್ಚಾಗಿದೆ. ಇತ್ತೀಚೆಗೆ ಬರೆಯುತ್ತಿರುವ ಯುವ ಕತೆಗಳು, ಸಲಿಂಗ ಲೈಂಗಿಕತೆಯ ಕುರಿತು ವಾಸ್ತವ ಚಿತ್ರಣವನ್ನು ಬರೆಯುತ್ತಿದ್ದಾರೆ.

-ವಸುದೇಂದ್ರ, ಕತೆಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News