ಡಿ ಗ್ರೂಪ್ ನೌಕರರ ಸಂಘದಲ್ಲಿ ​ಕೋಟ್ಯಂತರ ರೂ. ಭ್ರಷ್ಟಾಚಾರ: ಆರೋಪ

Update: 2019-11-08 12:47 GMT

ಬೆಂಗಳೂರು, ನ.8: ಕರ್ನಾಟಕ ರಾಜ್ಯ ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಬಿ.ಎಂ.ನಟರಾಜ್ ಸಂಘದಲ್ಲಿ ಭ್ರಷ್ಟಾಚಾರ ನಡೆಸಿ ಕೋಟ್ಯಂತರ ರೂ. ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆಯ ರಾಜ್ಯಾಧ್ಯಕ್ಷ ಎಸ್.ಆರ್.ರಾಘವೇಂದ್ರ ಆರೋಪಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಟರಾಜ್ ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಬಳಿಯ ಶ್ರೀಗಂಧ ಕಾವಲು ಗ್ರಾಮದ ಸರ್ವೇ ನಂಬರ್ 21/1 ರಿಂದ 30/2 ರವರೆಗೆ ಒಟ್ಟು 66 ಎಕರೆ ಜಮೀನನ್ನು ಬಿಡಿಎ ನಿಂದ ಪಡೆದು ಬಡಾವಣೆ ನಿರ್ಮಿಸುವುದಾಗಿ ನೌಕರರಿಗೆ ನಂಬಿಸಿ ಹಣವನ್ನು ಪಡೆದು ಹಣ ದುರುಪಯೋಗ ಪಡೆಸಿಕೊಂಡಿದ್ದಾರೆ ಎಂದು ಆಪಾದಿಸಿದರು. ಅವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತದಲ್ಲಿ ದೂರು ನೀಡಲಾಗಿದೆ. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದ ಅವರು, ಸಹಕಾರ ಸಂಘದಲ್ಲಿಯೂ ದೂರು ನೀಡಲಾಗಿದೆ. ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಗಿಡದ ಕೋಣೆನಹಳ್ಳಿಯಲ್ಲಿ 53 ಎಕರೆ ಜಮೀನನ್ನು ಸಂಘದಿಂದ ಖರೀದಿಸಿ ಬಡಾವಣೆ ನಕ್ಷೆ ಅನುಮೋದನೆ ಮಾಡದೆ ಅನೇಕರಿಗೆ ಮಾರಾಟ ಮಾಡಿ ವಂಚಿಸಿದ್ದಾರೆ. 2000 ನೇ ಸಾಲಿನಿಂದ ಇಲ್ಲಿಯವರೆಗೆ ಯಾವುದೇ ಮಹಾಸಭೆ ನಡೆಸದೆ ಸುಳ್ಳು ನಡಾವಳಿಗಳನ್ನು ದಾಖಲಿಸುತ್ತಾ ಸಂಘದ ಲೆಕ್ಕ ಪತ್ರಗಳನ್ನು ಪರಿಶೋಧನೆ ಮಾಡಿಸದೆ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದರು.

ಸಂಘದಲ್ಲಿ ಇಲ್ಲಿಯವರೆಗೂ ಯಾವುದೇ ಚುನಾವಣೆ ನಡೆಸದೆ ದರ್ಪದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು, 2019 ಜೂನ್ 10 ರಂದು ಸರಕಾರಿ ಸಂಘದ ಇಲಾಖೆಯಿಂದ ಆಡಳಿತಾಧಿಕಾರಿ ನೇಮಿಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಮುಖ್ಯಮಂತ್ರಿಗಳು ಕೂಡಲೇ ಇದರ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News