ಐಎಂಎ ವಂಚನೆ ಪ್ರಕರಣ: ನಿಂಬಾಳ್ಕರ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳ ನಿವಾಸಗಳಲ್ಲಿ ಸಿಬಿಐ ಶೋಧ

Update: 2019-11-08 13:35 GMT
ಅಜಯ್ ಹಿಲೋರಿ- ಹೇಮಂತ್ ನಿಂಬಾಳ್ಕರ್

ಬೆಂಗಳೂರು, ನ.8: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಉತ್ತರ ಪ್ರದೇಶದ ಮೀರತ್ ಸೇರಿದಂತೆ 15 ಕಡೆ ದಾಳಿ ನಡೆಸಿರುವ ಸಿಬಿಐ ತನಿಖಾಧಿಕಾರಿಗಳು, ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ನಿವಾಸಗಳಲ್ಲೂ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಶುಕ್ರವಾರ ರಾಜಧಾನಿ ಬೆಂಗಳೂರಿನ 11 ಕಡೆ ಹಾಗೂ ಮಂಡ್ಯ, ರಾಮನಗರ, ಬೆಳಗಾವಿಯಲ್ಲಿರುವ ಕೆಲವರ ಕಚೇರಿ, ಮನೆಗಳ ಮೇಲೆ ಪ್ರಮುಖ ದಾಖಲೆ ಪತ್ರಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಅಧಿಕಾರಿಗಳಿಗೆ ಬಿಸಿ?: ಆಡಳಿತ ವಿಭಾಗದ ಡಿಸಿಪಿ ಹೇಮಂತ್ ನಿಂಬಾಳ್ಕರ್, ಹಿರಿಯ ಐಪಿಎಸ್ ಅಧಿಕಾರಿಗಳಾದ ಅಜಯ್ ಹಿಲೋರಿ, ಶ್ರೀಧರ್, ಇನ್ಸ್‌ಪೆಕ್ಟರ್ ಎಂ.ರಮೇಶ್, ಸಬ್ ಇನ್ಸ್‌ಪೆಕ್ಟರ್ ಗೌರಿಶಂಕರ್ ಅವರ ನಿವಾಸಗಳ ಮೇಲೆ ದಾಳಿ ನಡೆಸಿ, ಕೆಲ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಲಾಯಿತು ಎಂದು ವರದಿಯಾಗಿದೆ.

ಕೆಲ ದಿನಗಳ ಹಿಂದಷ್ಟೇ, ಹೇಮಂತ್ ನಿಂಬಾಳ್ಕರ್ ಅವರನ್ನು ಸಿಬಿಐ ಅಧಿಕಾರಿಗಳು ಸತತ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಅವರು, ಸಿಐಡಿ ಆರ್ಥಿಕ ಅಪರಾಧ ವಿಭಾಗದ ಐಜಿಪಿಯಾಗಿದ್ದಾಗ ವಂಚನೆ ಪ್ರಕರಣದ ಪ್ರಮುಖ ರೂವಾರಿ ಮನ್ಸೂರ್ ಖಾನ್‌ನಿಂದ ಹಣ ಪಡೆದ ಆರೋಪ ಕೇಳಿಬಂದಿತ್ತು.

ಇನ್ನೋರ್ವ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಅವರ ಮೇಲೂ ಹಣ ಪಡೆದಿರುವ ಆರೋಪ ಇದ್ದು, ಇವರನ್ನು ಸಹ ಸಿಬಿಐ ವಿಚಾರಣೆ ನಡೆಸಿತ್ತು. ಇದೀಗ, ಹಿರಿಯ ಪೊಲೀಸ್ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದಿರುವುದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದಂತೆ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News