ಟ್ವೆಂಟಿ-20 ಸರಣಿ ವಶಪಡಿಸಿಕೊಂಡ ಆಸ್ಟ್ರೇಲಿಯ

Update: 2019-11-08 18:41 GMT

ಪರ್ತ್, ನ.8: ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಆ್ಯರೊನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಭರ್ಜರಿ ಬ್ಯಾಟಿಂಗ್ ನೆರವಿನಲ್ಲಿ ಆಸ್ಟ್ರೇಲಿಯ ತಂಡ ಇಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟ್ವೆಂಟಿ -20 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 10 ವಿಕೆಟ್‌ಗಳ ಜಯ ಗಳಿಸಿದೆ.

 ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯ 7 ವಿಕೆಟ್‌ಗಳ ಜಯ ಸಾಧಿಸಿತ್ತು. ಸ್ಮಿತ್ ಈ ಪಂದ್ಯದಲ್ಲಿ ಔಟಾಗದೆ 80 ರನ್ ಗಳಿಸಿದ್ದರು.

  ಪರ್ತ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 107 ರನ್‌ಗಳ ಸವಾಲನ್ನು ಪಡೆದ ಆಸ್ಟ್ರೇಲಿಯ 11.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 109 ರನ್ ಗಳಿಸಿತು. ಇಂದು ನಡೆದ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯದ ಆರಂಭಿಕ ಜೋಡಿ ವಾರ್ನರ್ ಮತ್ತು ಫಿಂಚ್ ಮೊದಲ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 109 ರನ್ ಸೇರಿಸಿದರು. ವಾರ್ನರ್ ಔಟಾಗದೆ 48 ರನ್(35ಎ, 4ಬೌ,2ಸಿ). ನಾಯಕ ಆ್ಯರೊನ್ ಫಿಂಚ್ ಔಟಾಗದೆ 52 ರನ್(36ಎ, 4ಬೌ,3ಸಿ) ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದರೊಂದಿಗೆ ಆಸ್ಟ್ರೇಲಿಯ ತವರಿನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ಗೆ ತಯಾರಿ ಆರಂಭಿಸಿದೆ. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 106 ರನ್ ಗಳಿಸಿತ್ತು. ಕೇನ್ ರಿಚರ್ಡ್ಸನ್ (18ಕ್ಕೆ 3), ಮಿಚೆಲ್ ಸ್ಟಾರ್ಕ್(29ಕ್ಕೆ 2), ಸಿಯಾನ್ ಅಬೊಟ್(14ಕ್ಕೆ 2), ಅಸ್ಟನ್ ಅಗರ್(25ಕ್ಕೆ 1) ದಾಳಿಗೆ ಸಿಲುಕಿದ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ಕಳಪೆ ಪ್ರದರ್ಶನ ನೀಡಿದರು. ಇಫ್ತಿಕರ್ ಅಹ್ಮದ್ 45 ರನ್(37ಎ, 6ಬೌ) ಮಾತ್ರ ಆಸ್ಟ್ರೇಲಿಯದ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಅವರು ಮೊದಲ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದರು. ಆದರೆ ಅವರಿಗೆ ಈ ಪಂದ್ಯದಲ್ಲಿ ಅರ್ಧಶತಕ ದಾಖಲಿಸಲು ಸಾಧ್ಯವಾಗಲಿಲ್ಲ. ಇವರನ್ನು ಹೊರತುಪಡಿಸಿದರೆ ಆರಂಭಿಕ ಬ್ಯಾಟ್ಸ್‌ಮನ್ ಇಮಾಮ್ ಉಲ್ ಹಕ್ (14) ಎರಡಂಕೆಯ ಸ್ಕೋರ್ ಜಮೆ ಮಾಡಿದರು.

ನಾಯಕ ಬಾಬರ್ ಆಝಮ್(6), ಮುಹಮ್ಮದ್ ರಿಝ್ವನ್(0), ಹಾರೀಸ್ ಸೊಹೈಲ್(8), ಖುಶಿದಿಲ್ ಷಾ (8), ಇಮಾದ್ ವಸೀಂ(6), ಶಾದಾಬ್ ಖಾನ್(1), ಮುಹಮ್ಮದ್ ಆಮಿರ್(ಔಟಾಗದೆ 9) ಮತ್ತು ಮುಹಮ್ಮದ್ ಹಸನೈನ್(ಔಟಾಗದೆ 4) ವಿಫಲರಾದರು. ಆಝಮ್ ಕಳೆದ ಎರಡು ಪಂದ್ಯಗಳಲ್ಲಿ ಸತತ ಅರ್ಧಶತಕ ದಾಖಲಿಸಿದ್ದರು. ಆದರೆ ಅವರನ್ನು ಸ್ಟಾರ್ಕ್ ಈ ಪಂದ್ಯದಲ್ಲಿ ಬೇಗನೇ ಪೆವಿಲಿಯನ್‌ಗೆ ಅಟ್ಟಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News