ನಾಲ್ಕನೇ ಟ್ವೆಂಟಿ-20: ಕಿವೀಸ್ ಕಿವಿ ಹಿಂಡಿದ ಇಂಗ್ಲೆಂಡ್

Update: 2019-11-08 18:44 GMT

ನೇಪಿಯರ್, ನ.8: ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಡೇವಿಡ್ ಮಲಾನ್ ಮಿಂಚಿನ ಶತಕ ಹಾಗೂ ನಾಯಕ ಇಯಾನ್ ಮೊರ್ಗನ್ ಜೊತೆಗಿನ ದಾಖಲೆ ಜೊತೆಯಾಟದ ನೆರವಿನಿಂದ ಇಂಗ್ಲೆಂಡ್ ತಂಡ ನ್ಯೂಝಿಲ್ಯಾಂಡ್ ವಿರುದ್ಧದ ನಾಲ್ಕನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು 76 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಇಂಗ್ಲೆಂಡ್ 5 ಪಂದ್ಯಗಳ ಟಿ-20 ಸರಣಿಯಲ್ಲಿ ಸಮಬಲ ಸಾಧಿಸಿದೆ. ರವಿವಾರ ಆಕ್ಲಂಡ್‌ನಲ್ಲಿ ನಡೆಯಲಿರುವ ಐದನೇ ಹಾಗೂ ಅಂತಿಮ ಪಂದ್ಯ ಕುತೂಹಲ ಕೆರಳಿಸಿದ್ದು, ಈ ಪಂದ್ಯವನ್ನು ಗೆಲ್ಲುವ ತಂಡ ಟ್ರೋಫಿ ಎತ್ತಿ ಹಿಡಿಯಲಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 241 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ಕಿವೀಸ್ 16.5 ಓವರ್‌ಗಳಲ್ಲಿ 165 ರನ್ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

 4.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 54 ರನ್ ಗಳಿಸಿದ್ದ ಕಿವೀಸ್ ಆರಂಭಿಕ ಆಟಗಾರ ಗಪ್ಟಿಲ್(27)ರನ್ನು ಬೇಗನೆ ಕಳೆದುಕೊಂಡಿತು. ಆ ಬಳಿಕ ಚೇತರಿಸಿಕೊಳ್ಳಲು ವಿಫಲವಾಯಿತು.ನಾಯಕ ಟಿಮ್ ಸೌಥಿ ಹಾಗೂ ಕಾಲಿನ್ ಮುನ್ರೊ(30)ಒಂದಷ್ಟು ಪ್ರತಿರೋಧ ಒಡ್ಡಿದರು. ಇಂಗ್ಲೆಂಡ್‌ನ ಪರ ಮ್ಯಾಟ್ ಪಾರ್ಕಿನ್‌ಸನ್(4-47)ಯಶಸ್ವಿ ಬೌಲರ್ ಎನಿಸಿಕೊಂಡರೆ, ಕ್ರಿಸ್ ಜೋರ್ಡನ್(2-24)ಎರಡು ವಿಕೆಟ್ ಪಡೆದರು.

ಇಂಗ್ಲೆಂಡ್ 241: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ಮಲಾನ್ (ಔಟಾಗದೆ 103 ರನ್) ಹಾಗೂ ನಾಯಕ ಮೊರ್ಗನ್(91 ರನ್)3ನೇ ವಿಕೆಟ್‌ಗೆ ಸೇರಿಸಿದ 182 ರನ್ ಜೊತೆಯಾಟದ ನೆರವಿನಿಂದ ದೊಡ್ಡ ಮೊತ್ತ ಕಲೆ ಹಾಕಿತು.

ಕೇವಲ 48 ಎಸೆತಗಳಲ್ಲಿ 100 ರನ್ ಪೂರೈಸಿದ ಮಲಾನ್ ವೇಗವಾಗಿ ಶತಕ ಸಿಡಿಸಿದ ಇಂಗ್ಲೆಂಡ್‌ನ ಮೊದಲ ಬ್ಯಾಟ್ಸ್ ಮನ್ ಎನಿಸಿಕೊಂಡರು. ಮೊರ್ಗನ್ ಜೊತೆ ದಾಖಲೆಯ ಜೊತೆಯಾಟದಲ್ಲಿ ಪಾಲ್ಗೊಂಡ ಮಲಾನ್ 51 ಎಸೆತಗಳ ಇನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 6 ಸಿಕ್ಸರ್‌ಗಳನ್ನು ಸಿಡಿಸಿದರು.

ಮಲಾನ್‌ಗೆ ಉತ್ತಮ ಸಾಥ್ ನೀಡಿದ ಮೊರ್ಗನ್ 41 ಎಸೆತಗಳಲ್ಲಿ ತಲಾ 7 ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿ 91 ರನ್ ಗಳಿಸಿ ಸೌಥಿಗೆ ವಿಕೆಟ್ ಒಪ್ಪಿಸಿದರು. ಈ ಇಬ್ಬರು ಎಡಗೈ ಬ್ಯಾಟ್ಸ್‌ಮನ್‌ಗಳು ಒಟ್ಟಿಗೆ 13 ಸಿಕ್ಸರ್‌ಗಳು ಹಾಗೂ 16 ಬೌಂಡರಿಗಳನ್ನು ಸಿಡಿಸಿದರು. ಮಿಚೆಲ್ ಸ್ಯಾಂಟ್ನರ್ ಹಾಗೂ ಟ್ರೆಂಟ್ ಬೌಲ್ಟ್ ಹೊರತುಪಡಿಸಿ ಉಳಿದವರೆಲ್ಲರೂ ಚೆನ್ನಾಗಿ ದಂಡಿಸಲ್ಪಟ್ಟರು. ಮಲಾನ್ ಟ್ವೆಂಟಿ-20ಯಲ್ಲಿ ಶತಕ ಸಿಡಿಸಿರುವ ಇಂಗ್ಲೆಂಡ್‌ನ 2ನೇ ಆಟಗಾರನಾಗಿದ್ದಾರೆ. ಅಲೆಕ್ಸ್ ಹೇಲ್ಸ್ ಕೇವಲ 60 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಜಾನಿ ಬೈರ್‌ಸ್ಟೋವ್(8) ಹಾಗೂ ಟಾಮ್ ಬ್ಯಾಂಟನ್(31) ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡ ಇಂಗ್ಲೆಂಡ್ ಕಳಪೆ ಆರಂಭ ಪಡೆದಿತ್ತು. ಈ ಇಬ್ಬರು ಸ್ಯಾಂಟ್ನರ್‌ಗೆ ವಿಕೆಟ್ ಒಪ್ಪಿಸಿದರು. ಆಗ ಜೊತೆಯಾದ ಮೊರ್ಗನ್ ಹಾಗೂ ಮಲಾನ್ ಪಂದ್ಯದ ಚಿತ್ರಣವನ್ನು ಬದಲಿಸಿದರು. ನ್ಯೂಝಿಲ್ಯಾಂಡ್ ಬೌಲರ್‌ಗಳ ಪೈಕಿ ಬ್ಲೈರ್ ಟಿಕ್ನೆರ್ 4 ಓವರ್‌ಗಳಲ್ಲಿ ಒಂದೂ ವಿಕೆಟ್ ಪಡೆಯದೇ 50 ರನ್ ಬಿಟ್ಟುಕೊಟ್ಟರು. ಸೋಧಿ 3 ಓವರ್‌ಗಳಲ್ಲಿ 49 ರನ್ ಬಿಟ್ಟುಕೊಟ್ಟರೆ, ಸೌಥಿ 47 ರನ್ ಕೇವಲ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News