ಕರ್ನಾಟಕಕ್ಕೆ ಸತತ 15ನೇ ಗೆಲುವು

Update: 2019-11-08 18:49 GMT

    ವಿಶಾಖಪಟ್ಟಣ, ನ.8: ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟೂರ್ನಮೆಂಟ್‌ನ ಮೊದಲ ಸುತ್ತಿನ ‘ಎ’ ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಉತ್ತರಾಖಂಡ ತಂಡದ ವಿರುದ್ಧ 9 ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸುವ ಮೂಲಕ ಶುಭಾರಂಭ ಮಾಡಿದೆ. ಕರ್ನಾಟಕ ಟೂರ್ನಿಯಲ್ಲಿ ಸತತ 15ನೇ ಜಯ ಸಾಧಿಸಿ ಹೊಸ ದಾಖಲೆ ನಿರ್ಮಿಸಿದೆ. ವಿಶಾಖಪಟ್ಟಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 133 ರನ್‌ಗಳ ಸವಾಲನ್ನು ಪಡೆದ ಕರ್ನಾಟಕ ತಂಡ 15.4 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ ಗೆಲುವಿಗೆ ಅಗತ್ಯದ ರನ್ ಸೇರಿಸಿತು. ಆರಂಭಿಕ ಬ್ಯಾಟ್ಸ್‌ಮನ್ ರೋಹನ್ ಕದಮ್ ಔಟಾಗದೆ 67 ರನ್(55ಎ, 6ಬೌ, 3ಸಿ) ಮತ್ತು ದೇವದತ್ತ ಪಡಿಕ್ಕಲ್ ಔಟಾಗದೆ 53 ರನ್(33ಎ, 4ಬೌ, 3ಸಿ) ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕರ್ನಾಟಕ 3.5 ಓವರ್‌ಗಳಲ್ಲಿ 25 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್‌ನ್ನು ಕೈ ಚೆಲ್ಲಿತ್ತು. ರವಿಕುಮಾರ್ ಸಮರ್ಥ 7 ರನ್ ಗಳಿಸಿ ಪ್ರದೀಪ್ ಚಾಮೊಲಿ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದು ನಿರ್ಗಮಿಸಿದರು. ಬಳಿಕ ಕದಮ್ ಮತ್ತು ದೇವದತ್ 2ನೇ ವಿಕೆಟ್‌ಗೆ 108 ರನ್‌ಗಳ ಜೊತೆಯಾಟ ನೀಡಿದರು. ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಉತ್ತರಾಖಂಡ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 132 ರನ್ ಗಳಿಸಿತ್ತು. ನಾಯಕ ತನ್ಮಯ ಶ್ರೀವಾಸ್ತವ(39), ವಿಕೆಟ್ ಕೀಪರ್ ಸೌರಭ್ ರಾವತ್(26), ಅನಿನೇಶ್ ಸುಧಾ(15), ದಿಕ್ಶಾಂಶು ನೇಗಿ (ಔಟಾಗದೆ 12) ಮತ್ತು ಮಾಯಾಂಕ್ ಮಿಶ್ರಾ(ಔಟಾಗದೆ 14) ಎರಡಂಕೆಯ ಸ್ಕೋರ್ ದಾಖಲಿಸಿದರು. ಕರ್ನಾಟಕದ ಅಭಿಮನ್ಯು ಮಿಥುನ್ ಮತ್ತು ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಮತ್ತು ಜಗದೀಶ್ ಸುಚಿತ್ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News