ರಾಮಮಂದಿರ ಭಾರತದಲ್ಲಿ ಕಟ್ಟದೆ ಪಾಕಿಸ್ತಾನದಲ್ಲಿ ಕಟ್ಟಲು ಸಾಧ್ಯವೇ?: ರೋಷನ್ ಬೇಗ್

Update: 2019-11-09 12:41 GMT

ಬೆಂಗಳೂರು, ನ.9: ರಾಮಮಂದಿರವನ್ನು ಭಾರತದಲ್ಲಿ ಕಟ್ಟದೆ, ಇನ್ನೇನು ಪಾಕಿಸ್ತಾನದಲ್ಲಿ ಕಟ್ಟಲು ಸಾಧ್ಯವೇ? ಎಂದು ಅಯೋಧ್ಯೆಯ ರಾಮಜನ್ಮ ಭೂಮಿ ಹಾಗೂ ಬಾಬರಿ ಮಸೀದಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪಿನ ಕುರಿತು ಅನರ್ಹ ಶಾಸಕ ಆರ್.ರೋಷನ್ ಬೇಗ್ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಶನಿವಾರ ಶಿವಾಜಿನಗರದಲ್ಲಿ ಮುಸ್ಲಿಮ್ ಸಮುದಾಯದ ಪ್ರಮುಖ ಮುಖಂಡರೊಂದಿಗೆ ಸುಪ್ರೀಂಕೋರ್ಟ್‌ನ ತೀರ್ಪಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸುಪ್ರೀಂಕೋರ್ಟ್‌ನ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಸುನ್ನಿ ವಕ್ಫ್ ಬೋರ್ಡ್‌ಗೆ ಬೇರೆ ಕಡೆ ಐದು ಎಕರೆ ಜಾಗವನ್ನು ನೀಡುವಂತೆಯೂ ನ್ಯಾಯಾಲಯ ಆದೇಶ ನೀಡಿದೆ. ಕೆಲವರು ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಅಂತಹ ಕೆಲಸಕ್ಕೆ ಕೈ ಹಾಕದಂತೆ ನಾನು ಮನವಿ ಮಾಡುತ್ತೇನೆ ಎಂದು ರೋಷನ್ ಬೇಗ್ ಹೇಳಿದರು.

ಈ ವಿವಾದ ನಮ್ಮ ಸಮುದಾಯಕ್ಕೂ ಸಾಕಾಗಿದೆ. ನಮ್ಮೆಲ್ಲರಿಗೆ ಸಮಾನತೆ, ಸೌಹಾರ್ದತೆಯಿಂದ ಬದುಕುವ ವಾತಾವರಣ ಬೇಕಿದೆ. ರಾಮಮಂದಿರ ಕಟ್ಟುವಾಗ ನಾವು ಮುಸ್ಲಿಮ್ ಸ್ವಯಂ ಸೇವಕರನ್ನು ಕರೆದುಕೊಂಡು ಬರುತ್ತೇವೆ. ಅದೇ ರೀತಿ ಮಸೀದಿ ಕಟ್ಟುವಾಗ ಹಿಂದೂಗಳು ಬರಲಿ. ಮಂದಿರ-ಮಸೀದಿಗಳನ್ನು ನಾವು ಜೊತೆಯಲ್ಲಿ ಕಟ್ಟಿ, ಸೌಹಾರ್ದತೆ, ಸಾಮರಸ್ಯದೊಂದಿಗೆ ಬದುಕೋಣ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News