ವಿವಾದಿತ ಭೂಮಿ ರಾಮ್ ಲಲ್ಲಾಗೆ: ಪುರಾವೆಗಳ ಬಗ್ಗೆ ಪ್ರಶ್ನೆಗಳನ್ನೆತ್ತಿದ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ

Update: 2019-11-09 16:50 GMT

 Photo: Mint
 

ಹೊಸದಿಲ್ಲಿ, ಅ. 9: ಅಯೋಧ್ಯೆ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಕುರಿತು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಶೋಕ್ ಕುಮಾರ್ ಗಂಗೂಲಿ ಶನಿವಾರ ಪ್ರಶ್ನೆ ಎತ್ತಿದ್ದಾರೆ ಹಾಗೂ ಈ ತೀರ್ಪಿನಿಂದ ನಾನು ವಿಚಲಿತನಾಗಿದ್ದೇನೆ ಎಂದಿದ್ದಾರೆ.

ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ಪೀಠ, ಶನಿವಾರ ಅಯೋಧ್ಯೆಯಲ್ಲಿರುವ 2.77 ಎಕರೆ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಸರ್ವಾನುಮತವಾಗಿ ಎತ್ತಿ ಹಿಡಿದಿದೆ ಹಾಗೂ ಪರ್ಯಾಯವಾಗಿ ಮುಸ್ಲಿಮರಿಗೆ ಉತ್ತರಪ್ರದೇಶದ ಅಯೋಧ್ಯೆಯ ಪ್ರಮುಖ ಸ್ಥಳದಲ್ಲಿ ಐದು ಎಕರೆ ಭೂಮಿ ನೀಡುವಂತೆ ಸರಕಾರಕ್ಕೆ ಆದೇಶಿಸಿದೆ.

‘‘ನಾನು ಈ ತೀರ್ಪಿನಿಂದ ಕೊಂಚ ವಿಚಲಿತನಾಗಿದ್ದೇನೆ. ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ನ ಈ ಹಿಂದಿನ ತೀರ್ಪಿನಲ್ಲಿ 500 ವರ್ಷಗಳ ಹಿಂದಿನ ಮಸೀದಿಯನ್ನು ಧ್ವಂಸಗೊಳಿಸಲಾಗಿದೆ ಎಂದು ದಾಖಲಿಸಲಾಗಿದೆ’’ ಎಂದು ಗಂಗೂಲಿ ಹೇಳಿದರು.

ಸಂವಿಧಾನ ಅಸ್ತಿತ್ವಕ್ಕೆ ಬಂದಾಗ ಕಾನೂನು ಬದಲಾದವು. ಧಾರ್ಮಿಕ ಸ್ವಾತಂತ್ರ್ಯ; ಧರ್ಮ ಬೋಧನೆ, ಆಚರಣೆಯನ್ನು ಮೂಲಭೂತ ಹಕ್ಕು ಎಂದು ನಾವು ಪರಿಗಣಿಸಿದೆವು. ನನಗೆ ಮೂಲಭೂತ ಹಕ್ಕು ಇದ್ದರೆ, ಪ್ರಾರ್ಥನಾ ಸ್ಥಳಗಳನ್ನು ರಕ್ಷಿಸುವ ಹಕ್ಕು ಕೂಡ ಇದೆ. ಮಸೀದಿಯನ್ನು ಧ್ವಂಸ ಮಾಡಿದ ದಿನದಂದೆ ಹಕ್ಕು ಕೂಡ ಧ್ವಂಸವಾಗಿದೆ ಎಂದು ಅವರು ಹೇಳಿದರು.

‘ಲ್ಯಾಂಡ್‌ಮಾರ್ಕ್ ಜಡ್ಜ್‌ಮೆಂಟ್ ದ್ಯಾಟ್ ಚೇಂಜಡ್ ಇಂಡಿಯಾ’ ಪುಸ್ತಕ ಬರೆದಿರುವ ಗಂಗೂಲಿ, ಭೂಮಿ ರಾಮ ಲಲ್ಲಾನಿಗೆ ಸೇರಿದ್ದು ಎಂದು ತಮ್ಮ ತೀರ್ಪಿನಲ್ಲಿ ಹೇಳಲು ನ್ಯಾಯಾಧೀಶರು ಯಾವ ಪುರಾವೆಯನ್ನು ಆಧಾರವಾಗಿ ಪರಿಗಣಿಸಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.

‘‘ಮಸೀದಿಯ ಅಡಿಯಲ್ಲಿ ಕಟ್ಟಡ ಇತ್ತು ಎಂದು ನೀವು ಹೇಳಿದ್ದೀರಿ. ಆದರೆ, ಕಟ್ಟಡ ಆ ದೇವಾಲಯದ್ದು ಎಂದು ನೀವು ಹೇಳಿಲ್ಲ. ದೇವಾಲಯ ಧ್ವಂಸಗೊಳಿಸಿದ ಬಳಿಕ ಮಸೀದಿ ನಿರ್ಮಿಸಲಾಯಿತು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಪುರಾತತ್ವ ಇಲಾಖೆಯ ಯಾವ ಒಳನೋಟ ಆಧಾರದಲ್ಲಿ ನೀವು 500 ವರ್ಷಗಳ ಬಳಿಕ ದೇವಾಲಯ ನಾಶಗೊಳಿಸಿ ಮಸೀದಿ ನಿರ್ಮಿಸಲಾಯಿತು ಎಂದು ನಿರ್ಧರಿಸಿದ್ದೀರಿ?’’ ಎಂದು ಪಶ್ಚಿಮಬಂಗಾಳದ ಮಾನವ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷರೂ ಆಗಿರುವ ಗಂಗೂಲಿ ಹೇಳಿದ್ದಾರೆ.

 ಒಂದು ವೇಳೆ ಆ ಸ್ಥಳದಲ್ಲಿ ನಮಾಝ್ ಮಾಡುತ್ತಾರೆ ಎಂದಾದರೆ, ಅದನ್ನು ಮಸೀದಿ ಎಂದು ಪರಿಗಣಿಸಬೇಕು ಎಂಬುದನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತ್ತು ಎಂದು ಹೇಳಿದ ಅವರು, ಆದುದರಿಂದ 500 ವರ್ಷಗಳಿಂದ ಇರುವ ಅದನ್ನು ಮಸೀದಿ ಎಂದು ಪರಿಗಣಿಸಿ, 500 ವರ್ಷಗಳ ಬಳಿಕ ಅದರ ಒಡೆತನವನ್ನು ನೀವು ಹೇಗೆ ನಿರ್ಧರಿಸುತ್ತೀರಿ ?, ಯಾವ ಆಧಾರದಲ್ಲಿ ನೀವು ನಿರ್ಧರಿಸಿದ್ದೀರಿ?, ನ್ಯಾಯಾಲಯಕ್ಕೆ ದಾಖಲೆಗಳೊಂದಿಗೆ ಯಾರು ಬಂದಿದ್ದಾರೆ ?, ಪುರಾತತ್ವ ಇಲಾಖೆಯ ವರದಿಯ ಆಧಾರದಲ್ಲಿ ನೀವು ಒಡೆತನವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News