ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಸಾತ್ವಿಕ್ ಸಾಯಿರಾಜ್-ಚಿರಾಗ್

Update: 2019-11-09 18:36 GMT

ಫುಝೌ(ಚೀನಾ),ನ.9: ಭಾರತೀಯ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಅವರ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಅಭಿಯಾನ ಶನಿವಾರ ಕೊನೆಗೊಂಡಿದೆ.

 700,000 ಯುಎಸ್ ಡಾಲರ್ ಬಹುಮಾನ ಮೊತ್ತದ ಪಂದ್ಯದ ಸೆಮಿ ಫೈನಲ್‌ನಲ್ಲಿ ವಿಶ್ವದ ನಂ.9ನೇ ಡಬಲ್ಸ್ ಜೋಡಿ ಸಾತ್ವಿಕ್-ಚಿರಾಗ್ ಮೂರು ಬಾರಿಯ ಹಾಲಿ ಚಾಂಪಿಯನ್ ಇಂಡೋನೇಶ್ಯದ ಮಾರ್ಕಸ್ ಫೆರ್ನಾಲ್ಡಿ ಗಿಡಿಯೊನ್ ಹಾಗೂ ಕೆವಿನ್ ಸಂಜಯ ಸುಕಮುಲ್ಜೊ ವಿರುದ್ಧ 16-21, 20-22 ಗೇಮ್‌ಗಳ ಅಂತರದಿಂದ ಶರಣಾಗಿ ಟೂರ್ನಿಯಿಂದ ನಿರ್ಗಮಿಸಿದರು.

ಸಾತ್ವಿಕ್ ಹಾಗೂ ಚಿರಾಗ್ ಇಂಡೋನೇಶ್ಯದ ಜೋಡಿಯ ವಿರುದ್ಧ ಸತತ 8ನೇ ಬಾರಿ ಸೋತಿದ್ದಾರೆ.

ಸಾತ್ವಿಕ್ ಹಾಗೂ ಚಿರಾಗ್ ಆಗಸ್ಟ್‌ನಲ್ಲಿ ಥಾಯ್ಲೆಂಡ್ ಓಪನ್‌ನಲ್ಲಿ ಚೊಚ್ಚಲ ಸೂಪರ್-500 ಪ್ರಶಸ್ತಿ ಎತ್ತಿ ಹಿಡಿದಿದ್ದರು. ಫ್ರೆಂಚ್ ಓಪನ್ ಸೂಪರ್ 750 ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದ ಈ ಜೋಡಿ 40 ನಿಮಿಷಗಳ ಹೋರಾಟದಲ್ಲಿ ತೀವ್ರ ಪ್ರತಿರೋಧ ಒಡ್ಡಿದರೂ ಅಂತಿಮವಾಗಿ ಸೋಲೊಪ್ಪಿಕೊಂಡಿತ್ತು.

ಸಾತ್ವಿಕ್ ಹಾಗೂ ಚಿರಾಗ್ ಈವರ್ಷ ಮೂರನೇ ಬಾರಿ ವಿಶ್ವದ ನಂ.1 ಜೋಡಿಯ ವಿರುದ್ಧ ಸೋತಿದ್ದಾರೆ. ಮೊದಲ ಗೇಮ್‌ನ ಆರಂಭದಲ್ಲಿ ಸಾತ್ವಿಕ್ ಹಾಗೂ ಚಿರಾಗ್ 7-4 ಮುನ್ನಡೆ ಪಡೆದಿದ್ದರೂ ಅದನ್ನು ಉಳಿಸಿಕೊಳ್ಳಲಾಗದೆ 16-21 ಅಂತರದಿಂದ ಸೋಲುಂಡಿತು.

ಎರಡನೇ ಗೇಮ್‌ನ ಆರಂಭದಲ್ಲೂ ಸಾತ್ವಿಕ್ ಹಾಗೂ ಚಿರಾಗ್ 3-1 ಮುನ್ನಡೆಪಡೆದಿದ್ದರು. ತಿರುಗೇಟು ನೀಡಿದ ಇಂಡೋನೇಶ್ಯದ ಜೋಡಿ 2ನೇ ಗೇಮ್‌ನ್ನು22-20 ಅಂತರದಿಂದ ವಶಪಡಿಸಿಕೊಂಡು ಸೆಮಿ ಫೈನಲ್ ತಲುಪಿತು.

ಸಾತ್ವಿಕ್ ಹಾಗೂ ಚಿರಾಗ್ ಸೆಮಿ ಫೈನಲ್‌ನಲ್ಲಿ ಮುಗ್ಗರಿಸಿದರೂ ಈ ವಾರ ಟೂರ್ನಿಯಲ್ಲಿ ಪರಿಣಾಮಕಾರಿ ಪ್ರದರ್ಶನದಿಂದ ಗಮನ ಸೆಳೆದಿದ್ದರು. ಎರಡನೇ ಸುತ್ತಿನಲ್ಲಿ ಆರನೇ ಶ್ರೇಯಾಂಕದ ಜಪಾನ್‌ನ ಹಿರೊಯುಕಿ ಎಂಡೊ ಹಾಗೂ ಯುಟಾ ವಟನಬೆ ಅವರನ್ನು ಸೋಲಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಚೀನಾದ ಜೋಡಿ ಲಿ ಜುನ್‌ಹುಯ್ ಹಾಗೂ ಲಿಯು ಯು ಚೆನ್‌ರನ್ನು ಸೋಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News