ಪತ್ರಕರ್ತರ ಮಾಸಾಶನ ನಿಯಮ ಸರಳ, ಆರೋಗ್ಯ ಕಾರ್ಡ್ ಸೇವೆ: ಸಿಎಂ ಯಡಿಯೂರಪ್ಪ

Update: 2019-11-10 11:47 GMT

ಬೆಂಗಳೂರು, ನ.10: ಪತ್ರಕರ್ತರ ಮಾಸಾಶನ ನಿಯಮಗಳನ್ನು ಸರಳೀಕರಣಗೊಳಿಸುವ ಜೊತೆಗೆ ಆರೋಗ್ಯ ಕಾರ್ಡ್ ಸೇವೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ರವಿವಾರ ಇಲ್ಲಿನ ಹೊಸಕೆರೆ ಹಳ್ಳಿಯ ವೀರಭದ್ರ ನಗರದಲ್ಲಿ ಬೆಂಗಳೂರು ಪ್ರೆಸ್‌ಕ್ಲಬ್‌ನ ಸುವರ್ಣ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಸರಕಾರ ಮತ್ತು ಮಾಧ್ಯಮದ ನಡುವೆ ದೀರ್ಘ ಕಾಲದಿಂದಲೂ ಉತ್ತಮ ಬಾಂಧವ್ಯವಿದೆ. ಸರಕಾರ ಸಹ ಪತ್ರಕರ್ತರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದರು. 2008ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ಪತ್ರಕರ್ತರ ವೃತ್ತಿ ಚಟುವಟಿಕೆಗಳಿಗೆ ಅನುಕೂಲವಾಗಲು ಎಲ್ಲ ಜಿಲ್ಲೆಗಳಲ್ಲೂ ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯ ಹಣ ಒದಗಿಸಿದ್ದೆ. 2-3 ಜಿಲ್ಲೆಗಳನ್ನು ಬಿಟ್ಟರೆ ಎಲ್ಲೆಡೆ ಪತ್ರಿಕಾ ಭವನ ನಿರ್ಮಾಣವಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ಪ್ರೆಸ್‌ಕ್ಲಬ್‌ನ ಭವನ ನಿರ್ಮಾಣಕ್ಕೆ ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಜೂರಾತಿ ನೀಡಿದ್ದರು. ನಂತರ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಹಣ ಬಿಡುಗಡೆಯಾಗಿತ್ತು ಎಂದ ಅವರು, ಇದೇ ಪ್ರದೇಶದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದವರಿಗೂ ನಿವೇಶನ ಹಾಗೂ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಹಣ ನೀಡಿದೆ ಎಂದರು.

ಎಲ್ಲ ಪತ್ರಕರ್ತರ ಸಂಘಟನೆಗಳು ಒಗ್ಗೂಡಿದರೆ, ವೃತ್ತಿಯ ಘನತೆ ಹೆಚ್ಚಾಗುತ್ತದೆ. ಎಲ್ಲ ಪತ್ರಕರ್ತರ ಸಂಘಟನೆಗಳು ಒಗ್ಗೂಡಬೇಕು. ನೂತನ ಪತ್ರಕರ್ತರ ಭವನದಲ್ಲಿ ವೃತ್ತಿಗೆ ಪೂರಕವಾದ ಚಟುವಟಿಕೆಗಳು ನಡೆಯಲಿ. ಪತ್ರಿಕಾ ವೃತ್ತಿಯ ಘನತೆ- ಗೌರವಗಳು ಹೆಚ್ಚಾಗುವುದಕ್ಕೆ ಈ ಪತ್ರಿಕಾಭವನ ನೆರವಾಗಲಿ ಎಂದು ಹಾರೈಸಿದರು. ಈ ಸಮಾರಂಭದಲ್ಲಿ ಮಾಜಿ ಸಚಿವರಾದ ಎಂ.ಕೃಷ್ಣಪ್ಪ, ಎಚ್.ಎಂ.ರೇವಣ್ಣ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News